ದೇರಳಕಟ್ಟೆ: ನಿಟ್ಟೆಯಲ್ಲಿ ಗ್ರಂಥಮಿತ್ರ ಕಾರ್ಯಕ್ರಮ ಉದ್ಘಾಟನೆ
ಕೊಣಾಜೆ: ಗ್ರಾಮೀಣ ಭಾಗದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ, ವ್ಯಕ್ತಿತ್ವ ವಿಕಸನ ಆಧುನಿಕತೆಯ ಸವಾಲುಗಳನ್ನು ಸರಳೀಕರಿಸುವ ವಿಧಾನಗಳ ಜ್ಞಾನ ತುಂಬಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಾಗ ಅವರ ವಿಕಸನವೂ ಸಾಧ್ಯ, ಉತ್ತಮ ಭವಿಷ್ಯ ರಚಿಸಲು ಸಹಕಾರಿಯಾಗುವುದು ಎಂದು ದ.ಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಆನಂದ್ ಐಎಎಸ್ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಮತ್ತು ಎಸ್ ಡಿಜಿ ಘಟಕ , ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ದೇರಳಕಟ್ಟೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಪಾನೀರು ಕ್ಯಾಂಪಸ್ಸಿನಲ್ಲಿ ಮಂಗಳವಾರ ಜರಗಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಜ್ಞಾನ ಕಲಿಸುವ ಗ್ರಂಥಮಿತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗ್ರಾಮೀಣ ಭಾಗದ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ನಗರಪ್ರದೇಶದ ವಿದ್ಯಾರ್ಥಿಗಳಿಗೆ ಸಿಗುವ ಆಧುನಿಕತೆಯ ಶಿಕ್ಷಣ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಜಿಲ್ಲೆಯ ಗ್ರಾಮೀಣ ಭಾಗವನ್ನು ಆಯ್ಕೆ ಮಾಡಿ ಗ್ರಾಮಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ನಿಟ್ಟೆ ವಿ.ವಿಯ ಎನ್ ಎಸ್ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಿ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಬಂದು ಜ್ಞಾನ ಸಂಪಾದನೆ ಮಾಡುವಂತೆ ಮಾಡಬೇಕಿದೆ. ಗ್ರಾಮಪಂಚಾಯಿತಿ ಗ್ರಂಥಾಲಯಗಳಲ್ಲಿ ಪ್ರತಿ ಶನಿವಾರ ಮಧ್ಯಾಹ್ನ ನಂತರ ವಿದ್ಯಾರ್ಥಿ ಗಳನ್ನು ತರಬೇತಿಯಲ್ಲಿ ತೊಡಗಿಸುವುದು ಉದ್ದೇಶವಾಗಿದೆ. ಅದಕ್ಕಾಗಿ ವಾಲಂಟಿಯರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುಕೊಂಡು, ವಿದ್ಯಾರ್ಥಿಗಳನ್ನು ನಗರಪ್ರದೇಶ ವಿದ್ಯಾರ್ಥಿಗಳಿಗೆ ಸರಿಸಮಾನ ಜ್ಞಾನವೃದ್ಧಿಸುವ ಕಾರ್ಯವಾಗಬೇಕಿದೆ ಎಂದರು.
ನಿಟ್ಟೆ ಪರಿಗಣಿತ ವಿ.ವಿಯ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಮಾತನಾಡಿ, ಪುಸ್ತಕ ಓದುವಿಕೆ ಜ್ಞಾನ ಸಂಪಾದನೆಗೆ ದಾರಿ. ಗ್ರಾಮೀಣ ಭಾಗವೇ ನಿಜವಾದ ಭಾರತ. ಅಭಿವೃದ್ಧಿ ಭಾರತದ ತಿಳುವಳಿಕೆಗಳನ್ನು ನೀಡಲು ಗ್ರಾಮೀಣ ವಿದ್ಯಾರ್ಥಿಗಳ ವಿಕಸನವಾಗಬೇಕಿದೆ. ಈ ಕಾರ್ಯದಲ್ಲಿ ನಿಟ್ಟೆ ವಿ.ವಿ ಸದಾ ಕೈಜೋಡಿಸಲಿದೆ ಎಂದರು
ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಆಡಳಿತ ನಿರ್ದೇಶಕ ಡಾ.ಶ್ರೀಶ ಭಟ್, ಎಸ್ ಟಿಜಿ ಕಾರ್ಡಿನೇಟರ್ ಡಾ. ಸ್ಮಿತಾ ಹೆಗ್ಡೆ ಉಪಸ್ಥಿತರಿದ್ದರು.
ನಿಟ್ಟೆ ವಿ.ವಿ ಎನ್ ಎಸ್ ಸಂಯೋಜಕ ಡಾ. ಶಶಿಕುಮಾರ್ ಶೆಟ್ಟಿ ಸ್ವಾಗತಿಸಿದರು. ವರ್ಷಾ ನಿರೂಪಿಸಿದರು.