ಮೋದಿ ಸರಕಾರ ಕಿತ್ತೊಗೆಯಲು ಕಾರ್ಮಿಕ ವರ್ಗದ ದೃಢ ನಿರ್ಧಾರ: ಜೆ. ಬಾಲಕೃಷ್ಣ ಶೆಟ್ಟಿ
ಮಂಗಳೂರು: ಒಳ್ಳೆಯ ದಿನಗಳು ಬರಲಿದೆ ಎಂದು ದೇಶದ ಜನತೆಗೆ ಮಂಕುಬೂದಿ ಎರಚಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರ ಕಳೆದ ೯ ವರ್ಷಗಳಲ್ಲಿ ನಿರಂತರವಾಗಿ ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವ ಮೂಲಕ ಜನ ಸಾಮಾನ್ಯರ ಬದುಕನ್ನು ನಾಶಗೊಳಿಸಿದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರ ಕೈಗೊಪ್ಪಿಸಿ ದೇಶದ ಆರ್ಥಿಕತೆ ಯನ್ನು ದಿವಾಳಿ ಮಾಡಿದೆ. ಇಂತಹ ಜನದ್ರೋಹಿ ಸರಕಾರ ಮತ್ತೆ ಅಧಿಕಾರಕ್ಕೇರಿದರೆ ದೇಶದ ಸ್ವಾತಂತ್ರ್ಯ ಸಮಗ್ರತೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಆದ್ದರಿಂದ ಇಂತಹ ಸರಕಾರವನ್ನು ಕಿತ್ತೊಗೆಯಲು ದೇಶದ ಕಾರ್ಮಿಕ ವರ್ಗ ದೃಢ ನಿರ್ಧಾರ ಕೈಗೊಂಡಿವೆ ಎಂದು ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಹೇಳಿದರು.
ನಗರದ ಬೋಳಾರ ಕಚೇರಿ ಸಭಾಂಗಣದಲ್ಲಿ ಸಿಐಟಿಯು ನೇತೃತ್ವದಲ್ಲಿ ರವಿವಾರ ನಡೆದ ದ.ಕ.ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಿಐಟಿಯು ರಾಜ್ಯ ನಾಯಕರಾದ ಸೈಯದ್ ಮುಜೀಬ್, ಮಾಲಿನಿ ಮೇಸ್ತ, ರಾಧಾ ಮೂಡುಬಿದಿರೆ ಉಪಸ್ಥಿತರಿದ್ದರು.