ಪಿಲಿಕುಳ ಕಂಬಳಕ್ಕೆ ಜಿಲ್ಲಾಧಿಕಾರಿಯಿಂದ ಸ್ಥಳೀಯ ಶಾಸಕರ ಕಡೆಗಣನೆ: ಉಮಾನಾಥ ಕೋಟ್ಯಾನ್ ಆರೋಪ
ಮಂಗಳೂರು: ಸರಕಾರಿ ಅನುದಾನದಲ್ಲಿ ನಡೆಯುವ ಪಿಲಿಕುಳ ಕಂಬಳದ ಪೂರ್ವಭಾವಿ ಸಭೆ, ಕರೆ ನಿರ್ಮಾಣಕ್ಕೆ ಚಾಲನೆ ಸೇರಿದಂತೆ ಯಾವುದೇ ಸಭೆಗೆ ಸ್ಥಳೀಯ ಶಾಸಕನಾದ ತನ್ನನ್ನು ಪರಿಗಣಿಸದೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕಡೆಗಣಿಸಿರುವುದಾಗಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.
ದ.ಕ. ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಕೂಡ ಇಂತಹ ಹಲವು ಘಟನೆಗಳ ಮೂಲಕ ಜಿಲ್ಲಾಧಿಕಾರಿಯವರು ಅವಮಾನ ಮಾಡಿದ್ದಾರೆ. ಇವರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲಾಗುವುದು ಎಂದು ತಿಳಿಸಿದರು.
ಸರಕಾರಿ ನೆಲೆಯ ಪಿಲಿಕುಳ ಕಂಬಳದ ಸರ್ವ ಸಿದ್ದತೆ ಆಯೋಜನೆ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಬೇಕಾದದ್ದು ನಿಯಮ. ಆದರೆ ದ.ಕ ಜಿಲ್ಲಾಧಿಕಾರಿಯವರು ನನಗೆ ಯಾವುದೇ ಮಾಹಿತಿ ನೀಡದೆ ಹಾಗೂ ನನ್ನನ್ನು ನಿರ್ಲಕ್ಷಿಸಿ ಸಭೆ, ಪೂರ್ವತಯಾರಿ ನಡೆಸಿದ್ದಾರೆ. ಹಿಂದೆ ಅಂತರ್‌ರಾಷ್ಟ್ರೀಯ ಮಟ್ಟದ ಸರ್ಫಿಂಗ್ ನಡೆದಾಗಲೂ ನನ್ನ ಗಮನಕ್ಕೆ ತರಲಿಲ್ಲ. ಕೆಂಜಾರು ಮಳೆ ಹಾನಿ ಸಂದರ್ಭವೂ ಡಿಸಿ ಕರೆದಿದ್ದ ಸಭೆಗೂ ನನ್ನನ್ನು ನಿರ್ಲಕ್ಷಿಸಿದರು. ಹಿಂದುಳಿದ ವರ್ಗದ ಶಾಸಕ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ಅವರು ನನ್ನನ್ನು ತಿರಸ್ಕಾರ, ಅವಮಾನ ಮಾಡುತ್ತಿದ್ದಾರೋ ಗೊತ್ತಿಲ್ಲ. ನನ್ನ ಕ್ಷೇತ್ರದ ಜನರು ನನಗೆ ನೀಡಿದ ಮತಕ್ಕೆ ಅವಮಾನ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ವಿರುದ್ದ ವಿಧಾನ ಸಭೆಯ ಸ್ಪೀಕರ್, ಮುಖ್ಯಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿಯವರಿಗೆ ರಾಜಕೀಯ ಆಸಕ್ತಿ ಇರುವುದಾದರೆ ಸಸಿಕಾಂತ್ ಸೆಂಥಿಲ್ ಅವರಂತೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಸೇರಲಿ. ಸೆಂಥಿಲ್ ಅವರು ರಾಜೀನಾಮೆ ನೀಡುವವರೆಗೆ ದಕ್ಷವಾಗಿ ಯಾವುದೇ ಪಕ್ಷಪಾತಿ ಧೋರಣೆ ಇಲ್ಲದೆ ಗೌರವದಲ್ಲಿ ನಡೆದಿದ್ದಾರೆ. ಆದರೆ, ಈಗಿನ ಡಿಸಿ ಮಾತ್ರ ನಿರಂತರ ಅವಮಾನ ನಡೆಸುತ್ತಿದ್ದಾರೆ. ಬಿಜೆಪಿ ಶಾಸಕರ ನೇತೃತ್ವದಲ್ಲಿ ಇವರ ವಿರುದ್ಧ ಅಹೋರಾತ್ರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಉಮಾನಾಥ ಕೋಟ್ಯಾನ್ ತಿಳಿಸಿದರು.
ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಈಶ್ವರ ಕಟೀಲು ಉಪಸ್ಥಿತರಿದ್ದರು.