ಪಾವೂರು ಉಳಿಯ| ಅಕ್ರಮ ಮರಳುಗಾರಿಕೆ ವಿರುದ್ಧ ಕಠಿಣ ಕ್ರಮಕ್ಕೆ ದ.ಕ.ಜಿಲ್ಲಾಧಿಕಾರಿ ಸೂಚನೆ
ಮಂಗಳೂರು ಎ.ಸಿ. ನೇತೃತ್ವದ ತನಿಖಾ ಸಮಿತಿಯ ವರದಿ ಆಧರಿಸಿ ನಿರ್ದೇಶನ
ಮಂಗಳೂರು: ಪಾವೂರು ಉಳಿಯದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಸೂಕ್ತ ಕ್ರಮಕ್ಕೆ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು, ಮಂಗಳೂರು ನಗರ ದಕ್ಷಿಣ ಉಪವಿಭಾಗದ ಪೊಲೀಸ್ ಉಪಾಯುಕ್ತರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗೆ ದ.ಕ.ಜಿಲಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದ್ದಾರೆ.
ಈಗಾಗಲೆ ಸಹಾಯಕ ಆಯುಕ್ತರ ನೇತೃತ್ವದಲ್ಲಿ ೬ ಮಂದಿಯ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ನೀಡಿದ ವರದಿಯ ಆಧಾರದ ಮೇಲೆ ಅಕ್ರಮ ಮರಳುಗಾರಿಕೆ ನಡೆಸುವ ದೋಣಿಗಳನ್ನು ಜಫ್ತಿ ಮಾಡಿ ಸರಕಾರದ ವಶಕ್ಕೆ ಪಡೆಯಬೇಕು. ಮರಳುಗಳನ್ನು ಶೇಖರಿಸಿಡುವ ಸ್ಥಳಗಳ ಮೇಲೆ ನಿಗಾವಹಿಸಬೇಕು. ಅಲ್ಲಿ ಮರಳನ್ನು ಶೇಖರಿಸಿಡದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಮರಳು ಶೇಖರಿಸಿಟ್ಟರೆ ಈ ಜಮೀನಿನ ಮಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಮರಳನ್ನು ಸಾಗಾಟ ಮಾಡುವ ವಾಹನಗಳು ಸಂಚರಿಸದಂತೆ ನದಿ ತೀರದ ರಸ್ತೆಯಲ್ಲಿ ಸಣ್ಣ ಕಂದಕ ನಿರ್ಮಿಸಬೇಕು ಎಂದು ಸೂಚಿಸಲಾಗಿದೆ.
ಪೊಲೀಸ್ ಇಲಾಖೆಯು ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯತೆ ಸಾಧಿಸಬೇಕು. ಈ ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕು, ಅಕ್ರಮವಾಗಿ ಮರಳು ಸಾಗಾಟ ಮಾಡುವ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ.
ಈ ಸೂಚನೆಯ ಹೊರತಾಗಿಯೂ ಅಕ್ರಮ ಮರಳುಗಾರಿಕೆ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ತನ್ನ ಅಧೀನದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಆದೇಶಿಸಿದ್ದಾರೆ.