ಆಟೊ ರಿಕ್ಷಾ ಚಾಲಕರ ದ.ಕ.ಜಿಲ್ಲಾ ಸಮಾವೇಶ
ಮಂಗಳೂರು: ಪ್ರತಿಯೊಬ್ಬರ ಬದುಕಿನಲ್ಲಿ ಅಪದ್ಭಾಂಧವರಾಗಿ ಬರುವ ಆಟೊರಿಕ್ಷಾ ಚಾಲಕರು ತಮ್ಮ ಜೀವನದ ಬಹುಪಾಲು ಸಮಯವನ್ನು ಜನರ ಸೇವೆಗಾಗಿ ಮೀಸಲಿಟ್ಟರೂ ಅವರ ಶ್ರಮಕ್ಕೆ ಯಾವುದೇ ಪ್ರತಿಫಲವಿಲ್ಲವಾಗಿದೆ. ವರ್ಷಕ್ಕೆ ಸುಮಾರು 3000 ಕೋ.ರೂ.ವಷ್ಟು ಹಣ ಸರಕಾರದ ಬೊಕ್ಕ ಸಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆಟೊ ರಿಕ್ಷಾ ಚಾಲಕರು ತೆರಿಗೆ ಕಟ್ಟುತಿದ್ದರೂ ಅವರಿಗೆ ಯಾವುದೇ ಸವಲತ್ತುಗಳಿಲ್ಲ. ಇಂತಹ ಸಂದರ್ಭ ರಿಕ್ಷಾ ಚಾಲಕರ ಉತ್ತಮ ಬದುಕಿಗಾಗಿ ಕಲ್ಯಾಣ ಮಂಡಳಿ ರಚನೆ ಮಾಡಬೇಕು.ಅಲ್ಲದೆ 1000 ಕೋ.ರೂ.ವನ್ನು ಮೀಸಲಿಡಬೇಕು ಎಂದು ಫೆಡರೇಶನ್ ಆಫ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ನಡೆದ ಆಟೊ ರಿಕ್ಷಾ ಚಾಲಕರ ದ. ಕ.ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿಎಂ ಭಟ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿತ್ಯನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಾ ಸಾರಿಗೆ ರಂಗದ ಕಾರ್ಮಿಕರು ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಅದರಲ್ಲೂ ಆಟೊ ರಿಕ್ಷಾ ಚಾಲಕರ ಬವಣೆಯಂತೂ ಹೇಳತೀರದಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಆಟೊ ರಿಕ್ಷಾ ಚಾಲಕರ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಆಟೊ ರಿಕ್ಷಾ ಚಾಲಕರನ್ನು ತಮ್ಮ ದಾಳವನ್ನಾಗಿಸುತ್ತಾ ಅವರ ಬದುಕಿನ ಪ್ರಶ್ನೆಗಳನ್ನು ಕೇಳುವವರೇ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ರಿಕ್ಷಾ ಚಾಲಕರ ಬಲಿಷ್ಠ ಚಳುವಳಿಯನ್ನು ಕಟ್ಟಲು ಎಲ್ಲರೂ ಒಂದಾಗಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಹಿರಿಯ ರಿಕ್ಷಾ ಚಾಲಕ ಮುಖಂಡರಾದ ಕೃಷ್ಣಪ್ಪ ಗೌಡ ಉಪಸ್ಥಿತರಿದ್ದರು.
*ಫೆಡರೇಶನ್‌ನ ಜಿಲ್ಲಾ ಗೌರವಾಧ್ಯಕ್ಷರಾಗಿ ಬಿಎಂ ಭಟ್, ಅಧ್ಯಕ್ಷರಾಗಿ ಸುನಿಲ್ ಕುಮಾರ್ ಬಜಾಲ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅನ್ಸಾರ್, ಖಜಾಂಚಿಯಾಗಿ ವಿಶ್ವನಾಥ್ ಶೆಟ್ಟಿ ಸಹಿತ ೧೬ ಮಂದಿ ಪದಾಧಿಕಾರಿಗಳು ಹಾಗೂ ೧೭ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಗೊಳಿಸಲಾಯಿತು.