ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ರಫಿಗೆ ಸನ್ಮಾನ
ಮಂಗಳೂರು : ಬೀಡಿ ಕಾರ್ಮಿಕರು ಹಾಗೂ ಶ್ರಮಿಕರ ಪರವಾಗಿ ಅವಿರತವಾಗಿ ಶ್ರಮಿಸಿದ ಹಾಗೂ ಜನಸಾಮಾನ್ಯರ ನೋವು ನಲಿವಿನ ಜತೆಗೆ ಸ್ಪಂದಿಸಿದ ಸಾಮಾಜಿಕ ಹೋರಾಟಗಾರ ಮಹಮ್ಮದ್ ರಫಿ ಅವರಿಗೆ ದೊರೆತ ಪ್ರಶಸ್ತಿಯು ಶ್ರಮಿಕ ವರ್ಗಕ್ಕೆ ದೊರೆತ ಗೌರವ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಕಾರ್ಮಿಕ ನಾಯಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ರಫಿ ಅವರಿಗೆ ಮಂಗಳೂರಿನ ವುಡ್‌ಲ್ಯಾಂಡ್ ಸಭಾಂಗಣದಲ್ಲಿ ರವಿವಾರ ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ಹಾಗೂ ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ಸ್ ಯೂನಿಯನ್ ಆಶ್ರಯದಲ್ಲಿ ಹಮ್ಮಿಕೊಂಡ ಸಮ್ಮಾನ ನೆರವೇರಿಸಿ ಅವರು ಮಾತನಾಡಿದರು.
ಬೀಡಿ ಕಟ್ಟುವ ಹಾಗೂ ಸಮಾಜದ ತಳಮಟ್ಟದಲ್ಲಿ ವಿವಿಧ ಸ್ತರದಲ್ಲಿ ಜೀವನ ನಡೆಸುತ್ತಿರುವ ಶ್ರಮಿಕರ ಪರವಾಗಿ ನಿಂತು ಪ್ರಬಲ ಹೋರಾಟ ಸಂಘಟಿಸುವ ಮುಂಚೂಣಿಯ ನಾಯಕರಾಗಿರುವ ಮಹಮ್ಮದ್ ರಫಿ ಅವರ ಜೀವನ ಸಾಧನೆ ಹೋರಾಟಗಾರರಿಗೆ ಮಾದರಿಯಾಗಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಪ್ರಕಾಶಕರಾದ ಕಲ್ಲೂರು ನಾಗೇಶ್ ಅವರು‘ ಧ್ವನಿ ಇಲ್ಲದ ಸಾಮಾನ್ಯ ಜನರಿಗೆ ಮಹಮ್ಮದ್ ರಫಿ ಬದುಕಿನ ದಾರಿಯನ್ನು ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹಮ್ಮದ್ ರಫಿ ಅವರು ನನಗೆ ದೊರೆತ ಜಿಲ್ಲಾ ಮಟ್ಟದ ಗೌರವ ನನ್ನ ಶ್ರಮಿಕ ವರ್ಗಕ್ಕೆ ದೊರೆತ ಗೌರವವಾಗಿದೆ. ಮುಂದೆಯೂ ಬೀಡಿ ಕಾರ್ಮಿಕರು ಸಹಿತ ಶ್ರಮಿಕರ ಶ್ರೇಯಸ್ಸಿಗಾಗಿಯೇ ಸಮಯ ಮುಡಿಪಾಗಿಡುತ್ತೇನೆ ಎಂದರು.
ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್, ಕಾಸರಗೋಡು ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣ ಎಂ.ಕಾಸರಗೋಡು, ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಕಂಟ್ರಾ ಕ್ಟರ್ಸ್ ಯೂನಿಯನ್ ಅಧ್ಯಕ್ಷ ಹರೀಶ್ ಕೆ.ಎಸ್, ಪ್ರಧಾನ ಕಾರ್ಯದರ್ಶಿ ಕಿರಣ್ ಸುವರ್ಣ, ಕೋಶಾಧಿಕಾರಿ ಇಸ್ಮಾಯಿಲ್ ಡಿ.ಎನ್. ಉಪಸ್ಥಿತರಿದ್ದರು. ಆರ್‌ಜೆ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.