ಎಪಿಎಂಸಿ ಸಚಿವರನ್ನು ಭೇಟಿ ಮಾಡಿದ ಜಿಲ್ಲಾ ವಕ್ಫ್ ಅಧ್ಯಕ್ಷ; ಮನವಿ ಸಲ್ಲಿಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್ ಅವರು ಕೃಷಿ ಮಾರುಕಟ್ಟೆ (ಎಪಿಎಂಸಿ) ಸಚಿವ ಶಿವಾನಂದ ಪಾಟೀಲ್ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಬೈಕಂಪಾಡಿ ಎಪಿಎಂಸಿ ಪ್ರಾಂಗಾಣದ ಅಭಿವೃದ್ದಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ನಾಸೀರ್ ಲಕ್ಕಿಸ್ಟಾರ್ ಅವರು, ಬೈಕಂಪಾಡಿಯಲ್ಲಿ ಎಪಿಎಂಸಿ ನಿರ್ಮಾಣಕ್ಕೆ ಸ್ಥಳೀಯರು ನೂರಾರು ಎಕರೆ ಫಲವತ್ತಾದ ಜಮೀನು ತ್ಯಾಗ ಮಾಡಿದ್ದಾರೆ. ಅದರೆ, ಸ್ಥಳೀಯರಿಗೆ ಎಪಿಎಂಸಿಯಿಂದ ಪ್ರಯೋಜನ ದೊರಕಿಲ್ಲ. ಇಲ್ಲಿನ ಮಳಿಗೆಗಳನ್ನು ಹಂಚಿಕೆ ಮಾಡುವಾಗ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಮನವರಿಕೆ ಮಾಡಿದರು.
ಎಪಿಎಂಸಿ ನಿರ್ವಸಿತರ ಕಾಲನಿ ಅಂಗರಗುಂಡಿ ಪ್ರದೇಶಕ್ಕೆ ಎಪಿಎಂಸಿ ಕಡೆಯಿಂದ ಸಂಚರಿಸಲು ಪ್ರವೇಶ ರಸ್ತೆಗೆ ಅನುಮತಿ ನೀಡಬೇಕು. ಎಪಿಎಂಸಿ ಪ್ರಾಂಗಣ ಮತ್ತು ಅಂಗರಗುಂಡಿ ಮಧ್ಯೆ ಇರುವ ರಾಜಾ ಕಾಲುವೆಯಿಂದ ಮಳೆಗಾಲದಲ್ಲಿ ಸ್ಥಳೀಯ ವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು, ಈ ತೋಡನ್ನು ಬಗ್ಗುಂಡಿ ಕೆರೆಯವರೆಗೆ ನಿರ್ಮಿಸಬೇಕು ಎಂದು ನಾಸೀರ್ ಲಕ್ಕಿಸ್ಟಾರ್ ಆಗ್ರಹಿಸಿದರು.
ಬೇಡಿಕೆಗಳನ್ನು ಆಲಿಸಿದ ಸಚಿವರು, ಕೂಡಲೇ ಇದಕ್ಕೆ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.