ಹಾಸ್ಯ ಸಾಹಿತ್ಯಕ್ಕೆ ಗೌರವ ಮನ್ನಣೆ ಸಿಗಲಿ: ಎಚ್. ದುಂಡಿರಾಜ್
ಮಂಗಳೂರು: ಹಾಸ್ಯ ಸಾಹಿತ್ಯ ಜನಪ್ರಿಯವಾಗಿದ್ದರೂ, ಇವತ್ತು ತಿರಸ್ಕಾರಕ್ಕೆ ಗುರಿಯಾಗಿದೆ. ನವೋದಯ ಕಾಲದಲ್ಲಿ ಹಾಸ್ಯ ಸಾಹಿತ್ಯಕ್ಕೆ ಒಳ್ಳೆಯ ಸ್ಥಾನಮಾನ ಇತ್ತು. ಆದರೆ ನವ್ಯ ಸಾಹಿತ್ಯದಲ್ಲಿ ಹಾಸ್ಯ ಸಾಹಿತ್ಯಕ್ಕೆ ಮನ್ನಣೆ ಕಡಿಮೆಯಾಗಿತ್ತು.ಹಾಸ್ಯ ಸಾಹಿತ್ಯಕ್ಕೆ ಗೌರವ ಮನ್ನಣೆ ಸಿಗಲಿ ಎಂದು ಖ್ಯಾತ ಹನಿಗವಿ ಎಚ್ .ದುಂಡಿರಾಜ್ ಹೇಳಿದ್ದಾರೆ.
ನಗರದ ಕುದ್ಮುಲ್ ರಂಗರಾವ್ ಪುರಭವನದ ಮಿಜಾರು ಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಶನಿವಾರ ಆರಂಭಗೊಂಡ ದ.ಕ.ಜಿಲ್ಲಾ 26ನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಹಾಸಭಾಸ-ನಗೆ ಸಮಯ’ ಎರಡನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನವ್ಯ ಸಾಹಿತ್ಯದ ಕಾಲದಲ್ಲಿ ಹಾಸ್ಯ ಸಾಹಿತ್ಯ ಕ್ಲಿಷ್ಟವಾದದ್ದು, ಸಂಕೀರ್ಣವಾದದ್ದು ಗಂಭೀರವಾದದ್ದು ಎಂಬ ಭಾವನೆ ಉಂಟಾಗಿ ವಿಮರ್ಶಕರು ತಮ್ಮನ್ನು ಮೆಚ್ಚುವುದಿಲ್ಲ ಎಂದು ಹಾಸ್ಯ ಸಾಹಿತ್ಯ ಬರೆಯುವವರು ಕೂಡಾ ಹಿಂದೆ ಸರಿದಿದ್ದರು. ಈ ಕಾರಣದಿಂದಾಗಿ ನವ್ಯ ಸಾಹಿತ್ಯ ಕಾಲದಲ್ಲಿ ಹಾಸ್ಯ ಸಾಹಿತ್ಯ ಬೆಳವಣಿಗೆ ಕುಂಠಿತಗೊಂಡಿತು. ಆದರೆ ಈಗ ನವ್ಯ ಸಾಹಿತ್ಯದ ಕಾಲ ಹೊರಟು ಹೋಗಿದೆ ಎಂದರು.
ದ.ಕ.ಜಿಲ್ಲೆಯಲ್ಲಿ ಹಾಸ್ಯ ಸಾಹಿತ್ಯಕ್ಕೆ ಅನೇಕ ಸಾಹಿತಿಗಳು ದೊಡ್ಡ ಕೊಡುಗೆ ನೀಡಿದ್ದಾರೆ. ಗಂಭೀರ ಸಾಹಿತ್ಯದಲ್ಲಿ ಹಾಸ್ಯ ಇದ್ದರೆ ಹಾಸ್ಯವನ್ನು ಜನರು ಕೊಂಡಾಡುತ್ತಾರೆ. ಪೂರ್ಣಚಂದ್ರ ತೇಜಸ್ವಿ, ಕುಂ.ವೀರಭಧ್ರಪ್ಪ, ಬೋಳುವಾರು ಮೊಹಮ್ಮದ್ ಕುಂಞಿ ಅವರ ಗಂಭೀರವಾದ ಬರವಣಿಗೆಯಲ್ಲಿ ಅದ್ಭುತವಾದ ಹಾಸ್ಯ ಇದೆ. ಒಳ್ಳೆಯ ಹಾಸ್ಯ ಇದ್ದರೆ ವಿಮರ್ಶಕರು ಮೆಚ್ಚುತ್ತಾರೆ. ಆದರೆ ಸಾಹಿತ್ಯದಲ್ಲಿ ಬರೇ ಹಾಸ್ಯ ಇದ್ದರೆ ಅದರ ಕಡೆಗೆ ಯಾರೂ ಗಮನ ಕೊಡುವುದಿಲ್ಲ ಎಂದರು.
ನಾಲ್ಕು ದಶಕಗಳನ್ನು ನಾನು ಮಂಗಳೂರಿನಲ್ಲಿ ಕಳೆದಿರುವೆನು. 36 ವರ್ಷಗಳ ಸೇವೆಯಲ್ಲಿ 13 ವರ್ಷ ಕಳೆದಿರುವೆನು. ಇದು ಕರ್ಮ ಭೂಮಿ ಹಾಗೂ ಜನ್ಮ ಭೂಮಿಯಾಗಿದೆ. ನನ್ನ ಸಾಹಿತ್ಯದ ಕೃಷಿ ಇಲ್ಲಿಂದಲೇ ಆರಂಭ ಇಲ್ಲಿಯೇ ಆಯಿತು. ಮೊದಲ ನಾಟಕ, ಕವನ ಸಂಕಲನ, ಹನಿಗವನ ಕೃತಿ ಬಿಡುಗಡೆ ಆಗಿದ್ದು ಇಲ್ಲಿಯೇ. ಕೆಲಸಕ್ಕೆ ಸೇರಿದ್ದು, ನಿವೃತ್ತರಾಗಿದ್ದು ಮಂಗಳೂರಿನಲ್ಲಿ ಎಂದು ಮಂಗಳೂರಿನ ತಮ್ಮ ಒಡನಾಟವನ್ನು ಡುಂಡಿರಾಜ್ ಸ್ಮರಿಸಿಕೊಂಡರು.
ಹಾಸ್ಯ ಬರೆಯುವವರು ಕಡಿಮೆ. ಅದರಲ್ಲೂ ಹೆಣ್ಣುಮಕ್ಕಳು ಹಾಸ್ಯದಿಂದ ಬಹಳ ದೂರ. ಹೆಣ್ಣು ಮಕ್ಕಳಿಗೆ ಹಾಸ್ಯ ಬರೆಯಲು ಸಾಕಷ್ಟು ವಿಷಯಗಳು ಇದೆ. ಸಾಹಿತಿ ಭುವನೇಶ್ವರಿ ಹೆಗಡೆ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ದ.ಕ.ಜಿಲ್ಲಾ ಕನ್ನಡ ಪರಿಷತ್ ಹಾಸ್ಯ ಸಾಹಿತ್ಯಕ್ಕೆ ದೊಡ್ಡ ಗೌರವ ನೀಡಿದೆ. ಪಾವೆಂ ಆಚಾರ್ಯ ಬಳಿಕ ಈ ಸ್ಥಾನಕ್ಕೆ ಏರಿದ ಎರಡನೇಯ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಎಂದರು.
ಸಮ್ಮೇಳನದ ಅಧ್ಯಕ್ಷೆ ಭುವನೇಶ್ವರ ಹೆಗಡೆ , ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಯದುಪತಿ ಗೌಡ, ಬಹುಭಾಷಾ ಕವಿ ಬಿ.ಎಸ್.ಅಮ್ಮೆಂಬಳ ಉಪಸ್ಥಿತರಿದ್ದರು.
ದ.ಕ.ಜಿಲ್ಲೆಯಲ್ಲಿ ಹಾಸ್ಯ ಸಾಹಿತ್ಯದ ಬಗ್ಗೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಆರ್.ನರಸಿಂಹ ಮೂರ್ತಿ, ಕನ್ನಡ ಸಾಹಿತ್ಯ ಮತ್ತು ಹಾಸ್ಯದ ಬಗ್ಗೆ ಕನ್ನಡ ಪ್ರಾಧ್ಯಾಪಕಿ ಡಾ.ಜ್ಯೋತಿಪ್ರಿಯ, ನಿತ್ಯ ಬದುಕಿನಲ್ಲಿ ಸಾಹಿತ್ಯದ ಬಗ್ಗೆ ಹಾಸ್ಯ ಸಾಹಿತಿ ಅನಿತಾ ನರೇಶ್ ಮಂಚಿ ವಿಚಾರ ಮಂಡಿಸಿದರು.
ಎನ್.ಗಣೇಶ್ ಪ್ರಸಾದ್ ಜೀ ಕಾರ್ಯಕ್ರಮ ನಿರೂಪಿಸಿದರು.
ಬಹುಭಾಷಾ ಗೋಷ್ಠಿ: ಬಹುಭಾಷಾ ವಿದ್ವಾಂಸ ಮುದ್ದುಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಅಕ್ಷಯ ಆರ್. ಶೆಟ್ಟಿ- ಕನ್ನಡ, ಎಂ.ಡಿ.ಮಂಚಿ-ಕನ್ನಡ, ರಘು ಇಡ್ಕಿದು- ತುಳು, ಗೀತಾ ಲಕ್ಷ್ಮೀಶ್ -ತುಳು, ಆದಂ ಹೆಂತಾರ್ -ಬ್ಯಾರಿ, ರೇಮಂಡ್ ಡಿ ಕುನಾ ತಾಕೋಡೆ-ಕೊಂಕಣಿ, ಕರುಣಾಕರ ನಿಡಿಂಜಿ-ಅರೆಭಾಷೆ ಮತ್ತು ಡಾ.ಸುರೇಶ್ ನೆಗಳಗುಳಿ -ಹವ್ಯಕ ಭಾಷೆಯಲ್ಲಿ ಸ್ವರಚಿತ ಕವನ ವಾಚಿಸಿದರು.