ಮುಮ್ತಾಝ್ ಅಲಿ ಪ್ರಕರಣ| ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್‌ಗೆ ಆ್ಯಸಿಡ್ ಎರಚುವ ಬೆದರಿಕೆ
ಕದ್ರಿ ಪೊಲೀಸ್ ಠಾಣೆಗೆ ದೂರು
ಮಂಗಳೂರು: ಉದ್ಯಮಿ ಮುಮ್ತಾಝ್ ಅಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್ ಗ್ರೂಪ್‌ವೊಂದರಲ್ಲಿ ಆ್ಯಸಿಡ್ ಎರಚುವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಅಕ್ಬರ್ ಕೃಷ್ಣಾಪುರ ಎಂಬಾತನ ವಿರುದ್ಧ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ʼನಮ್ಮೂರ ಸುದ್ದಿʼ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅಕ್ಬರ್ ಕೃಷ್ಣಾಪುರ ಎಂಬಾತ 20 ಸೆಕೆಂಡ್‌ನ ವಾಯ್ಸ್ ಮೆಸೇಜ್‌ನಲ್ಲಿ ನನಗೆ ಆ್ಯಸಿಡ್ ಎರಚುವ ಬೆದರಿಕೆ ಹಾಕಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ನಾಸಿರ್ ಲಕ್ಕಿಸ್ಟಾರ್ ದೂರಿನಲ್ಲಿ ತಿಳಿಸಿದ್ದಾರೆ. ವಾಟ್ಸ್‌ಆ್ಯಪ್ ಗ್ರೂಪ್‌ನ ಈ ಆಡಿಯೋ ಕೂಡ ವೈರಲ್ ಆಗಿದೆ.
ಇತ್ತು ಕೃಷ್ಣಾಪುರ ಎಂಬವರು ಅಡ್ಮಿನ್ ಆಗಿರುವ ನಮ್ಮೂರ ಸುದ್ದಿ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅ.24ರಂದು ಮಧ್ಯಾಹ್ನ 12:43ಕ್ಕೆ ಅಕ್ಬರ್ ಕೃಷ್ಣಾಪುರ ಎಂಬಾತ ಮುಮ್ತಾಝ್ ಅಲಿ ಪ್ರಕರಣದಲ್ಲಿ ನಾನು ಕೂಡಾ ಕಾರಣನಾಗಿರುವೆನೆಂದು ಬಿಂಬಿಸಿ, ಆತನ ಮೊಬೈಲ್ ಸಂಖ್ಯೆಯಿಂದ ನನ್ನನ್ನು ಉದ್ದೇಶಿಸಿ, ಇವರನ್ನೆಲ್ಲಾ ಏನು ಮಾಡಬೇಕೆಂದರೆ, ಮೊದಲು ಅಡ್ಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಇದನ್ನು ಬೈಕಂಪಾಡಿಯ ಅಂಗರಗುಂಡಿಯವರು ಮಾಡಬೇಕು. ಮುಖ ತೋರಿಸಬಾರದು, ಆ್ಯಸಿಡ್ ಎರಚಬೇಕು ಎಂಬುದಾಗಿ ನನಗೆ ಆ್ಯಸಿಡ್ ಎರಚುವಂತೆ ಪ್ರಚೋದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಸಿರ್ ಲಕ್ಕಿಸ್ಟಾರ್ ದೂರಿನಲ್ಲಿ ತಿಳಿಸಿದ್ದಾರೆ.