ಕ್ಯಾನ್ಸರ್ ಬಗ್ಗೆ ಭಯಬೇಡ, ಚಿಕಿತ್ಸೆ ಅಗತ್ಯ: ಡಾ. ಪ್ರಶಾಂತ್ ಮಾರ್ಲ
ಮಂಗಳೂರು, ಫೆ.10: ಕ್ಯಾನ್ಸರ್ ರೋಗವನ್ನು ಸೂಕ್ತ ಸಮಯದಲ್ಲಿ ಪತ್ತೆಹಚ್ಚಿ ಸಮರ್ಪಕ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲು ಸಾಧ್ಯ. ರೋಗಿಗಳು ಕ್ಯಾನ್ಸರ್ ಬಗ್ಗೆ ಭಯ ಪಡದೆ, ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದು ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಅಭಿಪ್ರಾಯಿಸಿದ್ದಾರೆ.
ಕುಂಟಿಕಾನದ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಶನಿವಾರ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಆಯೋಜಿಲಾದ ಜಾಗೃತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಜೆ ಆಸ್ಪತ್ರೆಯು ಅತ್ಯಾಧುನಿಕ ಸೌಲಭ್ಯ, ತಜ್ಞ ವೈದ್ಯರನ್ನು ಒಳಗೊಂಡ ಕ್ಯಾನ್ಸರ್ ವಿಭಾಗವನ್ನು ಹೊಂದಿದೆ ಎಂದು ಅವರು ಹೇಳಿದರು.
ರೇಡಿಯೇಶನ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಕಮಲಾಕ್ಷ ಶೆಣೈ ಕ್ಯಾನ್ಸರ್ ದೇಹದಲ್ಲಿ ಯಾವ ರೀತಿಯಲ್ಲಿ ರೂಪುಗೊಳ್ಳುತ್ತದೆ, ಸಂಭಾವ್ಯ ಕಾರಣಗಳ ಬಗ್ಗೆ ಮಾಹಿತಿ ನೀಡಿದರು.
ಕ್ಯಾನ್ಸರ್ ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದಾಗಿದ್ದು, ನಿಗದಿತ ಕಾರಣಗಳನ್ನು ಗುರುತಿಸುವುದು ಅಸಾಧ್ಯ. ಹಾಗಿದ್ದರೂ, ಸೂಕ್ತ ಆಹಾರ ಕ್ರಮ, ಕೆಟ್ಟ ಅಭ್ಯಾಸ, ರೇಡಿಯೇಶನ್ ಮತ್ತು ನೇರವಾಗಿ ಸೂರ್ಯನ ಕಿರಣಕ್ಕೆ ಮೈಯೊಡ್ಡುದನ್ನು ತಪ್ಪಿಸುವ ಮೂಲಕ ಬಹುತೇಕವಾಗಿ ಕ್ಯಾನ್ಸರ್ ಸಮಸ್ಯೆಯಿಂದ ದೂರ ಉಳಿಯಲು ಸಾಧ್ಯ ಎಂದವರು ಹೇಳಿದರು.
ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಕಾನ್ಸರ್ ವಿಧಗಳ ಬಗ್ಗೆ ಮಾತನಾಡಿದ ರೇಡಿಯೇಶನ್ ಆಂಕಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ. ಕವಿತಾ, ಮಹಿಳೆಯರು ತಮ್ಮ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಇತರರ ಜತೆ ಹೇಳಿಕೊಳ್ಳಲು ಅಂಜಿಕೆ ಅಥವಾ ಭಯದ ಕಾರಣದಿಂದ ಕ್ಯಾನ್ಸರ್‌ನಂತಹ ರೋಗ ಉಲ್ಬಣ ಸ್ಥಿತಿಗೆ ಹೋಗುವವರೆಗೂ ಚಿಕಿತ್ಸೆಯಿಂದ ದೂರ ಉಳಿದುಬಿಡುತ್ತಾರೆ. ಗರ್ಭ ಕೋಶ ಹಾಗೂ ಸ್ತನದ ಕ್ಯಾನ್ಸರ್ ಮಹಿಳೆಯರನ್ನು ಸಾಮಾನ್ಯವಾಗಿ ಕಾಡುತ್ತಿದ್ದು, ನಿಗದಿತ ಅವಧಿಯಲ್ಲಿ ಸ್ಕ್ಯಾನಿಂಗ್ ಮೂಲಕ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲು ಸಾಧ್ಯ ಎಂದರು.
ಯೇನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ಅಸೋಸಿಯೇಟ್ ಪ್ರೊಫೆಸರ್ ಡಾ. ದೀಪಾ ಕೊತಾರಿ, ಎಜೆ ಆಸ್ಪರತ್ರೆಯ ಮೆಡಿಕಲ್ ಆಂಕಾಲಜಿ ವಿಭಾಗದ ಡಾ. ರಚನಾ ಶೆಟ್ಟಿ, ಸರ್ಜಿಕಲ್ ಆಂಕಾಲಜಿ ವಿಭಾಗದ ಡಾ. ವಿಶ್ವನಾಥ್, ಪೇನ್ ಆ್ಯಂಡ್ ಪೆಲೆಟಿವ್ ಕೇರ್‌ನ ಡಾ.ನವೀನ್ ರುಡಾಲ್ಫ್ ರಾಡ್ರಿಗಸ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.
ರೇಡಿಯೇಶನ್ ಆಂಕಾಲಜಿ ವಿಭಾಗದ ಡಾ. ಹರ್ಷಶಾಜು ಸ್ವಾಗತಿಸಿದರು.