ತೃತೀಯ ಲಿಂಗಿಗಳಿಗೆ ಅನುಕಂಪ ಬೇಡ, ಉದ್ಯೋಗ ಕೊಡಿ: ಡಾ. ಮಾತಾ ಮಂಜಮ್ಮ ಜೋಗತಿ
ಬಿಂಬದೊಳಗೊಂದು ಬಿಂಬ ಲೋಕಾರ್ಪಣೆ
ಮಂಗಳೂರು: ತೃತೀಯ ಲಿಂಗಿಗಳಿಗೆ ಕೇವಲ ಪ್ರೀತಿ, ಅನುಕಂಪ ತೋರಿಸಿದರೆ ಪ್ರಯೋಜನವಿಲ್ಲ, ಅದರ ಬದಲುಅವರ ಸ್ವಂತ ಜೀವನಕ್ಕೆ ನೆರವಾಗಲು ಸಮಾಜ ಬಾಂಧವರು ಉದ್ಯೋಗ ನೀಡಲು ಮುಂದೆ ಬರಬೇಕು ಎಂದು ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದ್ದಾರೆ.
ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಹೊರತಂದ ಡಾ.ರೇಶ್ಮಾ ಉಳ್ಳಾಲ್ ಅವರ ಬಿಂಬದೊಳಗೊಅದು ಬಿಂಬ ಸಂಶೋಧನಾ ಕೃತಿಯನ್ನು ಇಲ್ಲಿನ ರೋಶನಿ ನಿಲಯ ಸಭಾಂಗಣದಲ್ಲಿ ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಾಲ್ಕನೇ ದರ್ಜೆ ನೌಕರನಿಂದ ತೊಡಗಿ ವಿವಿಧ ಹುದ್ದೆಗಳಿಗೆ ಅರ್ಹತೆ ಹೊಂದುವ ವಿದ್ಯಾವಂತ ತೃತೀಯ ಲಿಂಗಿಗಳೂ ಇದ್ದಾರೆ. ಅಂತಹವರಿಗೆ ಕೆಲಸ ನೀಡಲು ಸರಕಾರ ಹಾಗೂ ಸಂಘಸಂಸ್ಥೆಗಳು ಮುಂದೆ ಬರಬೇಕು. ವಯಸ್ಸಾದ ತೃತೀಯ ಲಿಂಗಿಗಳಿಗೆ ಮಾಸಾಶನ ನೀಡುವಂತಾಗಬೇಕು. ಆಗ ತೃತೀಯ ಲಿಂಗಿಗಳ ಬಗೆಗಿನ ಆಪಾದನೆ ದೂರವಾಗಬಹುದು ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ತಮ್ಮದಲ್ಲದ ತಪ್ಪಿಗೆ ಜನಿಸಿರುವ ತೃತೀಯ ಲಿಂಗಿಗಳನ್ನು ಸಮಾಜ ಬೇರೆಯಾಗಿ ಕಾಣದೆ ಸಮಾನತೆಯನ್ನು ತೋರಿಸಬೇಕು. ಅವರಿಗೂ ಬದುಕು ಇದೆ ಎಂಬುದನ್ನು ಮನಗಾಣಬೇಕು. ತೃತೀಯ ಲಿಂಗಿಗಳ ಬದುಕಿಗೆ ನೆರವಾಗುವ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಿದ್ಧವಾಗಿದೆ. ಸಮಾಜಸೇವಾ ಕಾರ್ಯದ ವಿದ್ಯಾರ್ಥಿಗಳು ಕೂಡ ತೃತೀಯ ಲಿಂಗಿಗಳ ಬದುಕು ಹಸನಾಗಲು ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆಶಿಸಿದರು.
ಕೃತಿಗೆ ಮುನ್ನುಡಿ ಬರೆದ ರಾಷ್ಟ್ರ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಸಲಿಂಗ ವಿವಾಹವನ್ನು ಸುಪ್ರೀಂ ಕೋರ್ಟ್ ತಿರಸ್ಕೃರಿಸಿದ ಸಂದರ್ಭದಲ್ಲೇ ಈ ಕೃತಿ ಹೊರತಂದಿರುವುದು ಸಕಾಲಿಕವಾಗಿದೆ. ತೃತೀಯ ಲಿಂಗಿಗಳ ಬದುಕನ್ನು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನೋಡಬೇಕು. ಜಾತಿ ಗಣತಿಯಲ್ಲಿ ತೃತೀಯ ಲಿಂಗಿಗಳ ಬದುಕನ್ನು ಹೇಗೆ ಗುರುತಿಸುತ್ತಾರೆ ಎಂಬುದನ್ನು ಪರಿಶೀಲಿಸಬೇಕಾಗಿದೆ. ತೃತೀಯ ಲಿಂಗಿಗಳ ಜೀವನಕ್ಕೆ ಬೇಕಾದ ಸವಲತ್ತುಗಳನ್ನು ಸರಕಾರ ನೀಡಬೇಕು. ನಾನು ತೃತೀಯ ಲಿಂಗಿಗಳ ಕುರಿತಾಗಿ ಮಾಡಿದ ಸಿನಿಮಾ ‘ನಾನು ಅವನಲ್ಲ, ಅವಳು’ ಅಂತಹ ಸದಭಿರುಚಿಯ ಚಿತ್ರಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತೋರಿಸಬೇಕಾಗಿದೆ. ಅದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಸಿನಿಮಾ ಕ್ಲಬ್ ರೂಪುಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಪಯಣ ಸಂಸ್ಥೆಯ ನಿರ್ದೇಶಕಿ ಸವಿತಾ ಮಾತನಾಡಿ, ಮೈಸೂರು ಹಾಗೂ ವಿಜಯಪುರಗಳಲ್ಲಿ ತೃತಿಯ ಲಿಂಗಿಗಳ ಬಗ್ಗೆ ಪ್ರಾಯೋಗಿಕವಾಗಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ತೃತೀಯ ಲಿಂಗಿಗಳಿಗೆ ಪೊಲೀಸರ ತೊಂದರೆ ತಪ್ಪಬೇಕು ಎಂದರು.
ರೋಶನಿ ನಿಲಯದ ಉಪಪ್ರಾಂಶುಪಾಲೆ ಡಾ.ಜೆನಿಸ್ ಮೇರಿ ಶುಭ ಕೋರಿದರು. ಹಿರಿಯ ಪತ್ರಕರ್ತ ರಾಮಕೃಷ್ಣ ಆರ್., ರಕ್ಷಿತ್ ಜಿ. ಉಳ್ಳಲ್, ಆರ್. ತನ್ವಿ ಉಪಸ್ಥಿತರಿದ್ದರು.
ಸಂಶೋಧಕಿ ಡಾ.ರೇಶ್ಮಾ ಉಳ್ಳಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕಿಶೋರ್ ಕುಮಾರ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸುಯೆಝ್ ಎಚ್. ಆರ್. ಮ್ಯಾನೇಜರ್ ರಾಕೇಶ್ ಶೆಟ್ಟಿ ವಂದಿಸಿದರು.
ತೃತೀಯ ಲಿಂಗಿ ಹುಟ್ಟಿದರೆ ಅವರನ್ನು ಮನೆಯಿಂದ ಹೊರಗೆ ಹಾಕಬೇಡಿ, ಅವರಿಗೆ ಶಿಕ್ಷಣ ನೀಡಿದರೆ ಅವರು ಜೀವನ ಸಾಗಿಸಬಲ್ಲರು. ಸರಕಾರ ಶೇ.೧ ಉದ್ಯೋಗ ಮೀಸಲಾತಿ ನೀಡಿದ್ದು, ಪೊಲೀಸ್, ಇಂಜಿನಿಯರ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿದ್ದಾರೆ.
ಸೀಮಂತ ಕಾರ್ಯದ ಸಂದರ್ಭದಲ್ಲೇ ತೃತೀಯ ಲಿಂಗಿ ಮಗು ಜನಿಸಿದರೆ ಅದನ್ನು ಮನೆಯಿಂದ ಹೊರಗೆ ಹಾಕದೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರತಿಜ್ಞೆಯಾಗಬೇಕು. ಈಗಾಗಲೇ ಶಿವಮೊಗ್ಗ, ಕೇರಳ, ತಮಿಳ್ನಾಡುಗಳಲ್ಲಿ ಈ ರೀತಿಯ ಸೀಮಂತ ಕಾರ್ಯಗಳು ನಡೆಯುತ್ತಿವೆ ಎಂದು ಡಾ.ಮಾತಾ ಬಿ.ಮಂಜಮ್ಮ ಜೋಗತಿ ಹೇಳಿದರು.
ತೃತೀಯ ಲಿಂಗಿಗಳ ಜೀವನಕ್ಕೆ ನೆರವಾಗಲು ಮಂಗಳೂರಿನಲ್ಲಿರುವ ಸುಯೆಝ್ ಕಂಪನಿ ಉದ್ಯೋಗದ ಆಫರ್ ನೀಡಿದೆ. ಕನಿಷ್ಟ ವಿದ್ಯಾರ್ಹತೆ ಹೊಂದಿರುವ ತೃತೀಯ ಲಿಂಗಿಗಳ ಪಟ್ಟಿಯನ್ನು ಕಳುಹಿಸಿದಲ್ಲಿ ಅವರೆಲ್ಲರಿಗೆ ತಮ್ಮದೇ ಕಂಪನಿಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಆಡಳಿತ ಮಂಡಳಿ ಹೇಳಿದೆ. ಮಂಗಳೂರಿನಲ್ಲಿರುವ ತೃತೀಯ ಲಿಂಗಿಗಳ ಸಮಗ್ರ ವಿವರಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ಸುಯೆಝ್ ಕಂಪನಿಯ ಮ್ಯಾನೇಜರ್ ರಾಕೇಶ್ ಶೆಟ್ಟಿ ಹೇಳಿದರು.