ಹೈದರಾಬಾದ್ ನಿಂದ ತಂದು ನಟ್ಟಿರುವ ಗಿಡವನ್ನು ಕಿತ್ತೊಯ್ಯಬೇಡಿ: ಸಾರ್ವಜನಿಕರಲ್ಲಿ ಕೈಮುಗಿದು ಬೇಡಿಕೊಂಡ ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರಿನಿಂದ ಉಪ್ಪಿನಂಡಿ ಸಂಪರ್ಕ ರಸ್ತೆಯಲ್ಲಿನ ರಸ್ತೆ ವಿಭಾಜಕದ ನಡುವೆ ಹೈದರಾಬಾದ್ ನಿಂದ ತರಿಸಿದ ಹೂವಿನ ಗಿಡವನ್ನು ನೆಡಲಾಗಿದೆ. ದಯವಿಟ್ಟು ಯಾರೂ ಈ ಗಿಡವನ್ನು ಕಿತ್ತುಕೊಂಡು ಹೋಗಬೇಡಿ. ಜೊತೆಗೆ ಗಿಡಕ್ಕೆ ಅಳವಡಿಸಿದ ಮ್ಯಾಟ್ ಮತ್ತು ನೀರಿನ ಪೈಪ್‍ಗಳನ್ನು ಕಿತ್ತುಕೊಂಡು ಹೋಗಬೇಡಿ. ನಿಮಗೆ ಕೈಮುಗಿದು ಬೇಡುತ್ತೇನೆ, ಇಂತಹ ಕೆಲಸ ಮಾಡದೆ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಾರ್ವಜನಿಕ ವಾಗಿ ಕೈಮುಗಿದು ಬೇಡಿಕೊಂಡ ಘಟನೆ ಶನಿವಾರ ನಡೆದಿದೆ.
ಅವರು ಶನಿವಾರ ಪುತ್ತೂರು - ಉಪ್ಪಿನಂಗಡಿ ರಸ್ತೆ ಕಾಮಗಾರಿಯ ಕುರಿತು ಅರಣ್ಯ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾಧ್ಯಮದ ಜೊತೆಗೆ ಮಾತನಾಡಿದ ಅವರು ಪುತ್ತೂರು-ಉಪ್ಪಿನಂಗಡಿ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಸುವ ನಿಟ್ಟಿನಲ್ಲಿ ಈಗಾಗಲೇ ಈ ರಸ್ತೆಗೆ 20 ಕೋಟಿ ರೂ. ಅನುದಾನ ಮಂಜೂರುಗೊಂಡಿದೆ. ಅದರಲ್ಲಿ ಹಲವಾರ ಕೆಲಸ ಕಾರ್ಯಗಳು ನಡೆಯುತ್ತಿವೆ. ರಸ್ತೆ ವಿಭಾಜಕದಲ್ಲಿ ನೆಟ್ಟಿರುವ ಹೂವಿನ ಗಿಡಗಳು, ಅದಕ್ಕೆ ಅಳವಡಿಸಿರುವ ಮ್ಯಾಟ್‍ಗಳು ಹಾಗೂ ನೀರಿನ ಪೈಪ್‍ಗಳನ್ನು ಕಿತ್ತುಕೊಂಡು ಹೋಗಬೇಡಿ. ನಿಮಗೆ ಬೇಕು ಎಂದಾದರೆ ನಾನು ಹೂವಿನ ಗಿಡ ಮತ್ತು ಹಣ್ಣಿನ ಗಿಡಗಳನ್ನು ನೀಡುತ್ತೇನೆ. ಇಂತಹ ಘಟನೆಗಳು ಸಾರ್ವಜನಿಕರಿಗೆ ಕಂಡು ಬಂದಲ್ಲಿ ದಯವಿಟ್ಟು ಅವರ ಫೋಟೋ ತೆಗೆದು ಪೊಲೀಸ್ ಠಾಣೆಗೆ ನೀಡಿ. ಅಭಿವೃದ್ಧಿಗೆ ಯಾರೂ ಅಡ್ಡಿಯಾಗಬೇಡಿ ಎಂದರು.
ಪುತ್ತೂರು- ಉಪ್ಪಿನಂಗಡಿ ಮಧ್ಯೆ ಬೇರಿಕೆಯಿಂದ ನೆಕ್ಕಿಲಾಡಿ ತನಕ ನಡೆದ ರಸ್ತೆ ಕಾಮಗಾರಿ ಮಳೆಗಾಲದಲ್ಲಿ ಹೊಂಡ ಬಿದ್ದಿದೆ. ಗುತ್ತಿಗೆದಾರರು ಕೆಲವೇ ದಿನಗಳಲ್ಲಿ ದುರಸ್ತಿ ಮತ್ತು ಉಳಿಕೆ ಕಾಮಗಾರಿ ನಡೆಸಲಿದ್ದಾರೆ. ಮುಂದಿನ ಕೆಲವೇ ಸಮಯದಲ್ಲಿ ಪೂರ್ತಿಗೊಳ್ಳಲಿದೆ. ಅಲ್ಲದೆ ಬೊಳುವಾರು- ಹಾರಾಡಿ ಭಾಗದ ರಸ್ತೆ, ಸೇಡಿಯಾಪು- ಕೋಡಿಂಬಾಡಿ ಭಾಗದ ರಸ್ತೆ ಮತ್ತು ನೆಕ್ಕಿಲಾಡಿ ಭಾಗದ ರಸ್ತೆಯ ಚತುಷ್ಪಥ ಕಾಮಗಾರಿಯೂ ಈ ವರ್ಷ ಆರಂಭಗೊಳ್ಳಲಿದೆ. ಈ ಮೂಲಕ ಪುತ್ತೂರು - ಉಪ್ಪಿನಂಗಡಿ ಮಧ್ಯೆ ಪೂರ್ಣ ಚತುಷ್ಪಥ ರಸ್ತೆಯಾಗಲಿದೆ. ರಸ್ತೆ ವಿಭಾಜಕದಲ್ಲಿ ಬೀದಿ ದೀಪಗಳನ್ನು ಅಳವಡಿಸಲು 5 ಕೋಟಿ ರೂ. ಅನುದಾನಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಪುತ್ತೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಾರಾಂ, ಸಹಾಯಕ ಎಂಜಿನಿಯರ್ ತೌಸಿಫ್, ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಉಪ ವಲಯ ಅರಣ್ಯಾಧಿಕಾರಿ ಯಶೋಧರ ಕೆ., ಅರಣ್ಯ ಇಲಾಖೆಯ ಆರ್‍ಎಫ್‍ಒ ಕಿರಣ್ ಬಿ.ಎಂ., ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ರಹಿಮಾನ್ ಯುನಿಕ್, ಮುಖಂಡರಾದ ವಿಕ್ರಂ ರೈ ಕೋಡಿಂಬಾಡಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.