ತುಳು ಭಾಷೆ ಉಳಿವಿಗೆ ಯುವಕರ ಶ್ರಮ ಶ್ಲಾಘನೀಯ: ಸ್ಪೀಕರ್ ಯು.ಟಿ. ಖಾದರ್
ತುಳು ಚಿತ್ರ ‘ಜೈ’ ಟೈಟಲ್ ಅನಾವರಣ ಕಾರ್ಯಕ್ರಮ
ಮಂಗಳೂರು: ಬಿಗ್ ಬಾಸ್ ರೂಪೇಶ್ ಶೆಟ್ಟಿ ಹಾಗೂ ತಂಡದ ತುಳು ಚಲನಚಿತ್ರ ಜೈ’’ ಇದರ ಟೈಟಲ್ ಅನಾವರಣ ಕಾರ್ಯಕ್ರಮ ರವಿವಾರ ಸಂಜೆ ಸಿಟಿ ಸೆಂಟರ್ ಮಾಲ್‌ನಲ್ಲಿ ಜರುಗಿತು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಹಿಂದೆ ತುಳು ಭಾಷೆ ನಮ್ಮ ಜಿಲ್ಲೆಗೆ ಮಾತ್ರ ಸೀಮಿತ ಎಂಬ ಮಾತಿತ್ತು. ಆದರೆ ಇಂದು ತುಳು ರಂಗಭೂಮಿ ಮತ್ತು ಸಿನಿಮಾರಂಗದಿಂದಾಗಿ ವಿದೇಶಗಳಲ್ಲೂ ತುಳು ಭಾಷೆ ಪ್ರಚಾರವಾಗುತ್ತಿದೆ. ರೂಪೇಶ್ ಶೆಟ್ಟಿ ಅವರಂತಹ ಯುವಕರು ಇಂದು ತುಳು ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿರು ವುದು ಶ್ಲಾಘನೀಯ ಎಂದರು.
ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ತೆಲಿಕೆದ ಬೊಳ್ಳಿ ದೇವದಾಸ ಕಾಪಿಕಾಡ್, ಪ್ರಕಾಶ್ ಪಾಂಡೇಶ್ವರ್, ಪಮ್ಮಿ ಕೊಡಿಯಾಲ್ ಬೈಲ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಭೋಜರಾಜ ವಾಮಂಜೂರು, ಶರ್ಮಿಳಾ ಕಾಪಿಕಾಡ್, ಲಕ್ಷ್ಮ್ಮಣ ಕುಮಾರ್ ಮಲ್ಲೂರು, ತಾರಾನಾಥ ಶೆಟ್ಟಿ ಬೋಳಾರ, ಪ್ರೇಮ್ ಶೆಟ್ಟಿ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.
ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು. ಜೈ ತುಳು ಸಿನಿಮಾ ಆರ್‌ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿದೆ. ರೂಪೇಶ್ ಶೆಟ್ಟಿ ನಿರ್ದೇಶನದ ಸಿನಿಮಾಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ಕತೆ, ಸಂಭಾಷಣೆ ರಚಿಸಿದ್ದಾರೆ.
ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನೃತ್ಯ ನವೀನ್ ಶೆಟ್ಟಿ ಆರ್ಯನ್ಸ್, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾಪಕರು ದೀಕ್ಷಿತ್ ಆಳ್ವ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ.
ಈ ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಲಿದ್ದು, ಉಳಿದ ತಾರಾಗಣದ ಆಯ್ಕೆ ನಡೆಯಲಿದೆ. ಅಕ್ಟೋಬರ್ ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.