ಭೂ ಮಾಲಕರ ಸಮಸ್ಯೆ ಪರಿಹಾರಕ್ಕೆ ಯತ್ನ: ದ.ಕ. ಡಿಸಿ ಮುಲ್ಲೈ ಮುಗಿಲನ್
ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಸಾಣೂರು-ಬಿಕರ್ನಕಟ್ಟೆ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ಭೂ ಮಾಲಕರ ಪರಿಹಾರಕ್ಕೆ ಸಂಬಂಧಿಸಿದ ಎದುರಾದ ಸಮಸ್ಯೆಯನ್ನು ಬಗೆಹರಿಸಲು ದ.ಕ. ಜಿಲ್ಲಾಡಳಿತ ಪ್ರಯತ್ನಿಸಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹೇಳಿದರು.
ದ.ಕ. ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಗುರುವಾರ ಭೂಮಾಲಕರ ಹೋರಾಟ ಸಮಿತಿಯೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಹೆದ್ದಾರಿಗಳು ಅಭಿವೃದ್ಧಿ ಸೂಚ್ಯಂಕದ ಮಾಪನವಾಗಿದೆ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಆರ್ಥಿಕ ಚಟುವಟಿಕೆಗಳ ಏಳಿಗೆಗೆ ಪೂರಕವಾಗಿರುತ್ತದೆ. ಈ ದಿಸೆಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಭೂಮಿ ಒದಗಿಸಿದ ಭೂ ಮಾಲಕರ ಸಮಸ್ಯೆಗಳನ್ನು ಬಗೆಹರಿ ಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಸಿ ಭರವಸೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ, ವಿಶೇಷ ಭೂಸ್ವಾದೀನಾಧಿಕಾರಿ ಮುಹಮ್ಮದ್ ಇಸಾಕ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ, ಭೂ ಮಾಲಕರ ಹೋರಾಟ ಸಮಿತಿಯ ಅಧ್ಯಕ್ಷೆ ಮರಿಯಮ್ಮ ಥಾಮಸ್, ಸಂಚಾಲಕ ಪ್ರಕಾಶ್, ಪ್ರಮುಖರಾದ ರತ್ನಾಕರ, ಜಯರಾಮ್ ಪೂಜಾರಿ, ವಿಶ್ವಜಿತ್ ಮತ್ತಿತರರು ಪಾಲ್ಗೊಂಡಿದ್ದರು.