ಮಂಗಳೂರು ಮನಪಾ ವ್ಯಾಪ್ತಿಯ 33 ಕಡೆ ಬೀದಿಬದಿ ವ್ಯಾಪಾರ ವಲಯ ಸ್ಥಾಪನೆ: ಮೇಯರ್ ಫೋನ್ ಇನ್ ಕಾರ್ಯಕ್ರಮ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 33 ಕಡೆಗಳಲ್ಲಿ ಬೀದಿ ಬದಿ ವ್ಯಾಪಾರ ವಲಯ ತೆರೆಯಲು ನಿರ್ಧರಿಸಲಾ ಗಿದೆ. ಮೊದಲನೇ ಹಂತದಲ್ಲಿ ಸ್ಟೇಟ್‌ಬ್ಯಾಂಕ್ ಬಳಿಯ ಇಂದಿರಾ ಕ್ಯಾಂಟಿನ್ ಬಳಿ ಬೀದಿಬದಿ ವ್ಯಾಪಾರ ವಲಯ ಆರಂಭ ವಾಗಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.
ಮಂಗಳೂರು ಪಾಲಿಕೆಯಲ್ಲಿ ಶುಕ್ರವಾರ ನಡೆದ ‘ಮೇಯರ್ ಫೋನ್ ಇನ್’ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾ ಡಿದರು. 93 ಮಂದಿ ಬೀದಿ ವ್ಯಾಪಾರಿಗಳ ಪಟ್ಟಿ ತಯಾರಿಸಲಾಗಿದೆ. ಗುರುತಿನ ಚೀಟಿ ನೀಡುವ ಕೆಲಸವನ್ನು ಆ.31ರಂದು ಮಾಡಲಾಗುವುದು. ಚೀಟಿ ಎತ್ತುವ ಮೂಲಕ ಸ್ಟಾಲ್‌ಗಳನ್ನು ವ್ಯಾಪಾರಿಗಳಿಗೆ ನಿಗದಿಪಡಿಸಲಾಗುವುದು. ಬೀದಿ ಬದಿ ವ್ಯಾಪಾರ ವಲಯಲ್ಲಿ ವಿದ್ಯುತ್, ನೀರಿನ ವ್ಯವಸ್ಥೆ ಸಹಿತ ಮೂಲಭೂತ ವ್ಯವಸ್ಥೆ ಕಲ್ಪಿಸಲಿದ್ದೇವೆ. ಪಾಲಿಕೆ ವ್ಯಾಪ್ತಿಯ ಇತರ ಕಡೆಗಳಲ್ಲಿಯೂ ಹಂತ ಹಂತವಾಗಿ ವ್ಯಾಪಾರ ವಲಯ ಸ್ಥಾಪಿಸಲಾಗುವುದು ಎಂದು ಮೇಯರ್ ತಿಳಿಸಿದರು.
ಕಾವೂರಿನಲ್ಲಿ ಅನಧಿಕೃತ ಬೀದಿ ಬದಿ ವ್ಯಾಪಾರ ತೆರವು ಮಾಡಿದ ಜಾಗದಲ್ಲಿ ಪಾರ್ಕ್ ಅಥವಾ ವಾಹನ ನಿಲುಗಡೆಗೆ ಪೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಉದ್ಯಮಿಗಳು ಕೂಡಾ ಆಸಕ್ತಿ ವಹಿಸಿದ್ದು, ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ತೆರವು ಮಾಡಿದ ವ್ಯಾಪಾರಿಗಳಿಗೆ ಕಾವೂರು ಮಾರುಕಟ್ಟೆ ಬಳಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮೇಯರ್ ಭರವಸೆ ನೀಡಿದರು.
*ಫೋನ್ ಇನ್ ಕಾರ್ಯಕ್ರಮದಲ್ಲಿ ಮೇರಿಹಿಲ್‌ನ ಜೆಸಿಂತಾ, ದೇರೆಬೈಲ್ ನಿತ್ಯಾನಂದ ಕಾಮತ್, ರತೀಶ್ ಕುಲಶೇಖರ, ಸ್ಟಾನಿ ಸಿಕ್ವೇರಾ, ಮೇರಿಹಿಲ್‌ನ ಭಗಿನಿ ಯಾನ, ವಿಶ್ವನಾಥ ಕೋಟೆಕಾರ್, ಕಂಕನಾಡಿಯ ಜೋಸೆಫ್ ಡಿಸೋಜ, ಬಿಜೈಯ ಜಿ.ಆರ್.ಪ್ರಭು, ನೇಮು ಕೊಟ್ಟಾರಿ ಮತ್ತಿತರರು ಸಮಸ್ಯೆಗಳನ್ನು ಮೇಯರ್ ಮುಂದಿಟ್ಟರು.
ಈ ಸಂದರ್ಭ ಉಪಮೇಯರ್ ಸುನೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ, ಉಪ ಆಯುಕ್ತ ರವಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.