ಫರಂಗಿಪೇಟೆ: ಯುವಕನಿಗೆ ಚೂರಿ ಇರಿತ; ಆರೋಪಿ ಪರಾರಿ
ಬಂಟ್ವಾಳ : ಮನೆಯೊಳಗೆ ನುಗ್ಗಿ ಯುವಕನೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಇರಿತಕ್ಕೊಳಗಾದಯುವಕನನ್ನು ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ ಮಹಮ್ಮದ್ ರಮೀಝ್ (19) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ರಮೀಝ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಅಬ್ದುಲ್ ರಹಿಮಾನ್ ಎಂಬಾತ ಆರೋಪಿಯಾಗಿದ್ದಾನೆ. ಹಣಕಾಸಿನ ಮತ್ತು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಮೀಝ್ ನನ್ನು ಕೊಲೆ ಮಾಡುವ ಉದ್ದೇಶದಿಂದ ಪೋನ್ ಮಾಡಿ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ಆರೋಪಿ ಅಬ್ದುಲ್ ರಹಿಮಾನ್, ಮನೆಯೊಳಗೆ ಬಂದು ಚೂರಿಯಿಂದ ಎರಡು ಬಾರಿ ತಿವಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Next Story