ಬೇಕಾಬಿಟ್ಟಿ ಮಾತನಾಡುವ ಬಿ.ಕೆ. ಹರಿಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸಿ: ಆರ್. ಅಶೋಕ್
"ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 3-4 ಸ್ಥಾನ ಪಡೆಯಲಿದೆ"
ಮಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ಕಾಮನ್‌ಸೆನ್ಸ್ ಎಂಬುದೇ ಇಲ್ಲ. ರಾಮಮಂದಿರ ಉದ್ಘಾಟನೆಯ ವೇಳೆ ಗೋದ್ರಾ ಮಾದರಿ ಗಲಭೆಯಾಗುತ್ತದೆ. ಈ ಬಗ್ಗೆ ದಾಖಲೆ ಇದೆ ಎನ್ನುವ ಅವರು ಅದನ್ನು ತನಿಖಾಧಿಕಾರಿಗೆ ಸಲ್ಲಿಸಲಿ, ಅದು ಬಿಟ್ಟು ಕಾಮನ್‌ಸೆನ್ಸ್ ಇಲ್ಲದೆ ಹೇಳಿಕೆ ನೀಡುವುದು ಸರಿಯಲ್ಲ. ಬೇಕಾಬಿಟ್ಟಿ ಮಾತನಾಡುವ ಅವರ ವಿರುದ್ಧವೇ ಪ್ರಕರಣ ದಾಖಲಿಸಿ ಅವರನ್ನು ಸಮಗ್ರ ತನಿಖೆಗೊಳಪಡಿಸಲಿ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದರು.
ನಗರದ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಗೆ ರವಿವಾರ ಭೇಟಿ ನೀಡಿದ ವೇಳೆ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಕಾಂಗ್ರೆಸ್‌ಗೆ ರಾಮಮಂದಿರ ಭೀತಿ ಕಾಡುತ್ತಿದ್ದು, ಅದಕ್ಕಾಗಿ ಹಿಂದೂಗಳ ಮೇಲಿನ ಹಳೆ ಕೇಸ್‌ಗಳನ್ನು ತೆರೆಯುವ ಮೂಲಕ ಹಿಂದು-ಮುಸ್ಲಿಂ ನಡುವೆ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಆರ್.ಅಶೋಕ್ ಆರೋಪಿಸಿದರು.
ಕಾಂಗ್ರೆಸ್‌ಗೆ ಬರೇ 3-4 ಸ್ಥಾನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಕೇವಲ 3-4 ಸ್ಥಾನ ಮಾತ್ರ ಪಡೆಯಲಿದೆ ಎಂದು ಆಂತರಿಕ ಸಮೀಕ್ಷೆಗಳು ಹೇಳುತ್ತಿವೆ. ಬಿಜೆಪಿ 25ಕ್ಕೂ ಅಧಿಕ ಸ್ಥಾನದಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಇದು ಕಾಂಗ್ರೆಸಿಗರ ನಿದ್ದೆಗೆಡಿಸಿದ್ದು, ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರಕಾರದ ಅಸ್ತಿತ್ವಕ್ಕೆ ಅಪಾಯ ಇದೆ ಎಂದರು.
ಜ.8: ಬೆಂಗಳೂರಲ್ಲಿ ಚಿಂತನಾ ಸಭೆ
ಲೋಕಸಭಾ ಚುನಾವಣೆಯ ತಯಾರಿಯ ನಿಟ್ಟಿನಲ್ಲಿ ಜ.8ರಂದು ಬೆಂಗಳೂರಿನಲ್ಲಿ ಚಿಂತನಾ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಆಯ್ದ 40 ಮಂದಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಯಾವ ರೀತಿ ಸಿದ್ಧತೆ ನಡೆಸಬೇಕು. ಪ್ರಮುಖ ಜವಾಬ್ದಾರಿ, ಪ್ರಭಾರಿಗಳ ನೇಮಕದ ವಿಚಾರಗಳನ್ನು ಚರ್ಚಿಸಲಾಗುತ್ತದೆ. ಹಾಲಿ ಸಂಸದರಲ್ಲದೆ ಹೊಸಬರನ್ನು ಎಲ್ಲೆಲ್ಲಿ ಕಣಕ್ಕೆ ಇಳಿಸಬೇಕು ಎಂಬ ಬಗ್ಗೆಯೂ ಚರ್ಚಿಸಲಾಗುವುದು. ಹೈಕಮಾಂಡ್ ಸೂಚನೆಯ ಬಳಿಕವೇ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಭ್ಯರ್ಥಿಗಳ ಕುರಿತಂತೆ ಆಂತರಿಕ ಸಮೀಕ್ಷೆ ನಡೆಸಲಾಗಿದೆ. ಅದರ ವರದಿ ಕೇಂದ್ರ ನಾಯಕರ ಮುಂದಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.
ಈ ಸಂದರ್ಭ ಮಾಜಿ ಸಚಿವ ಬೈರತಿ ಬಸವರಾಜು, ಶಾಸಕ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಹಾಜರಿದ್ದರು.