ಬಜ್ಪೆ ಪೊಲೀಸರ ಕಾರ್ಯಚರಣೆ: ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ಐವರ ಬಂಧನ
ಬಜ್ಪೆ, ಅ.13: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಪೋರ್ಕೊಡಿ ನಿವಾಸಿ ಮುಹಮ್ಮದ್ ಮುನಾಝ್, ಕಸಬಾ ಬೆಂಗ್ರೆಯ ನಿವಾಸಿ ಮುಹಮ್ಮದ್ ಅಫ್ರಾರ್, ಬಡಗುಳಿಪಾಡಿ ಗ್ರಾಮದ ನಿವಾಸಿ ರಾಹಿಲ್ ಮೊಯ್ದಿನ್ ಶರೀಫ್, ಮೂಡುಪೆರಾರ ಗ್ರಾಮದ ಗುರುಕಂಬಳದ ನಿವಾಸಿ ಮುಲ್ಲಾ ಅಬ್ದುಲ್ ಅಮನ್ ಮತ್ತು ಕಂದಾವರ ಗ್ರಾಮದ ಅಮಾನುಲ್ಲಾ ಕಂಪೌಂಡ್ ನಿವಾಸಿ ಮುಹಮ್ಮದ್ ಶಾಹಿನ್ ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರ ಪೈಕಿ ಮುನಾಝ್ ಮತ್ತು ಮುಹಮ್ಮದ್ ಅಫ್ರಾರ್ ಕಂಜಾರು ಗ್ರಾಮದ ಪೋರ್ಕೊಡಿ ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದರೆ, ರಾಹಿಲ್ ಮೊಯ್ದಿನ್ ಶರೀಫ್, ಮುಲ್ಲಾ ಅಬ್ದುಲ್ ಅಮನ್ ಮತ್ತು ಮುಹಮ್ಮದ್ ಶಾಹಿನ್ ಅವರು ಕೊಳಂಬೆ ಗ್ರಾಮದ ಕಾಲೇಜ್ ಬಳಿ ಹಾಗೂ ಕಂದಾವರ ಗ್ರಾಮದ ಅದ್ಯಪಾಡಿ ದ್ವಾರದ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಜ್ಪೆ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದೆ.