ಮೊಳಹಳ್ಳಿ ಶಿವರಾವ್ ರಿಂದ ಜಿಲ್ಲೆಯ ಸಹಕಾರಿ ರಂಗಕ್ಕೆ ಬಲಿಷ್ಠ ತಳಹದಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
*ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಮೊಳಹಳ್ಳಿ ಶಿವರಾವ್ ರವರ 143ನೇ ಜನ್ಮ ದಿನಾಚರಣೆ
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಸಹಕಾರಿ ರಂಗದ ಬೆಳವಣಿಗೆಗೆ ಬಲಿಷ್ಠ ತಳಹದಿ ಹಾಕಿಕೊಟ್ಟ ಹಿರಿಮೆ ಮೊಳಹಳ್ಳಿ ಶಿವರಾವ್ ರವರಿಗೆ ಸಲ್ಲುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ದ.ಕ ಜಿಲ್ಲಾ ಸಹಕಾರಿ ಯೂನಿಯನ್ ನ ಸಹಯೋಗದಲ್ಲಿ ಎಸ್ ಸಿ ಡಿ ಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಹಕಾರಿ ರಂಗದ ಪಿತಾಮಹ ದಿ.ಮೊಳಹಳ್ಳಿ ಶಿವರಾವ್ ಅವರ 143ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
1909ರಲ್ಲಿ ಮೊಳಹಳ್ಳಿ ಶಿವರಾವ್ ರವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಿಸಿದ ಸಹಕಾರಿ ರಂಗ ಇಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವುದು ಅವರಿಗೆ ಸಂದ ಗೌರವವಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಸವಾಲುಗಳ ನಡುವೆ ಎತ್ತಿ ನ ಗಾಡಿಯಲ್ಲಿ ಸಂಚರಿಸಿ ಸಹಕಾರಿ ರಂಗವನ್ನು ಜೊತೆಗೆ ಶಿಕ್ಷಣ ರಂಗವನ್ನು, ಸಾಂಸ್ಕೃತಿಕ ರಂಗವನ್ನು ಮೊಳಹಳ್ಳಿ ಶಿವರಾವ್ ಬೆಳೆಸಿದ್ದಾರೆ. ಜಿಲ್ಲೆಯ 170 ಸಹಕಾರಿ ಶಾಖೆಗಳ ಮೂಲಕ ಪ್ರಮುಖ ಬ್ಯಾಂಕ್ ಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಅದು ಬೆಳೆದಿದೆ. ಮೊಳಹಳ್ಳಿ ಶಿವರಾವ್ ರಾಜಕೀಯ ರಂಗದಲ್ಲೂ ಪ್ರತಿನಿಧಿಯಾಗಿ ವಿವಿಧ ಕ್ಷೇತ್ರದಲ್ಲಿ ಜನಸೇವೆ ಮಾಡಿದವರು ಎಂದು ಡಾ.ರಾಜೇಂದ್ರ ಕುಮಾರ್ ಸ್ಮರಿಸಿದರು.
*ಗಾಂಧೀಜಿಯ ಮೇಲೆ ಪ್ರಭಾವ ಬೀರಿದ ಸಾಧಕ: ಉಪನ್ಯಾಸ ನೀಡಿದ ನಿಕಟಪೂರ್ವ ರಾಜ್ಯ ಎನ್ನೆಸ್ಸೆಸ್ ಅಧಿಕಾರಿ, ಕರ್ನಾಟಕ ಸರ್ಕಾರದ ಪದ ನಿಮಿತ್ತ ಜಂಟಿ ಕಾರ್ಯ ದರ್ಶಿ ಗಣನಾಥ ಎಕ್ಕಾರು, ಕರಾವಳಿಯ ಶಿಕ್ಷಣ, ಸಹಕಾರ, ಸಾಂಸ್ಕೃತಿಕ ರಾಜಕೀಯ ರಂಗದಲ್ಲಿ ಮಹತ್ವದ ಪ್ರಭಾವ ಬೀರಿದ ಸಾಧಕ ರಾಗಿದ್ದರು ಮೊಳಹಳ್ಳಿ ಶಿವರಾವ್. ಗಾಂಧೀಜಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಕಡಿದಾಳ ಮಂಜಪ್ಪನಂತಹ ಮಹಾನ್ ವ್ಯಕ್ತಿಗಳ ಮೇಲೆ ಪ್ರಭಾವ ಬೀರಿದ ಮಹಾನ್ ನಾಯಕ ಎಂದು ತಿಳಿಸಿದ್ದಾರೆ.
ಮೊಳಹಳ್ಳಿ ಸಂವಿಧಾನದ ಆದರ್ಶದ ಪ್ರಕಾರ ಕಾರ್ಯ ನಿರ್ವಹಿಸಿದ ಅದ್ಭುತ ವ್ಯಕ್ತಿತ್ವ. ಅವರು ವ್ಯಕ್ತಿಯಲ್ಲ, ಶಕ್ತಿಯಾಗಿ ಬೆಳೆದವರು. ಶಿಕ್ಷಣ ರಂಗದ ಜೊತೆ ಸಾಂಸ್ಕೃತಿಕ, ರಾಜಕೀಯ ರಂಗದಲ್ಲೂ ಕಾರ್ಯ ನಿರ್ವಹಿಸಿದವರಾಗಿದ್ದರು. ಮೊಳಹಳ್ಳಿ ಶಿವರಾವ್ ಎಲ್ಲರಿಗಾಗಿ ನಾವು ನಮಗಾಗಿ ಎನ್ನುವ ಸಹಕಾರಿ ತತ್ವ ದೊಂದಿಗೆ ಸಹಕಾರಿ ರಂಗವನ್ನು ತಳಮಟ್ಟದಿಂದಲೂ ಬೆಳೆಸಿದ ಸಹಕಾರ ರಂಗದ ಪಿತಾಮಹ ರಾಗಿದ್ದರು ಎಂದು ಗಣನಾಥ ಎಕ್ಕಾರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ಮೊಳಹಳ್ಳಿ ಶಿವರಾವ್ ಬೆಳೆಸಿದ ಸಹಕಾರ ಕ್ಷೇತ್ರ ಇಂದು ವಿಸ್ತಾರವಾಗಿ ಬೆಳೆಯಲು ಅವರ ದೂರದೃಷ್ಟಿ ಕಾರಣ ಎಂದು ತಿಳಿಸಿದ್ದಾರೆ.
ಸಮಾರಂಭದ ವೇದಿಕೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಉಡುಪಿ ಜಿಲ್ಲಾ ಸಹಕಾರ ಬ್ಯಾಂಕ್ ಗಳ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಬ್ಯಾಂಕ್ ನಿರ್ದೇಶಕರುಗಳಾದ ಎಂ.ವಾದಿರಾಜ ಶೆಟ್ಟಿ, ರಾಜು ಪೂಜಾರಿ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೋಟ್ಟು, ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ, ಕೆ.ಜೈರಾಜ್ ಬಿ ರೈ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್. ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸ್ವಾಗತಿಸಿದರು. ಚಿತ್ರಲೇಖಾ ಪ್ರಾರ್ಥಿಸಿದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.