ಗೇರುಕಟ್ಟೆ: ಮೀಫ್ ನಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ 'ಪೂರ್ವಸಿದ್ಧತಾ ಕಾರ್ಯಾಗಾರ'
ಬೆಳ್ತಂಗಡಿ, ಡಿ.9: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್)ದ ವತಿಯಿಂದ ಬೆಳ್ತಂಗಡಿ ತಾಲೂಕಿನ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ 'ಪೂರ್ವಸಿದ್ಧತಾ ಶಿಬಿರ'ವು ಗೇರುಕಟ್ಟೆಯ ಮನ್ಶರ್ ವಿದ್ಯಾ ಸಂಸ್ಥೆಯಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಮಾತನಾಡಿ, ದ.ಕ. ಮತ್ತು ಉಡುಪಿ ಜಿಲ್ಲೆಗಳ 10 ಕೇಂದ್ರಗಳಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು, ಈ ಬಾರಿ ದ.ಕ. ಜಿಲ್ಲೆಯನ್ನು ಅಗ್ರಸ್ಥಾನಕ್ಕೇರಿಸಲು ಶಿಕ್ಷಣ ಇಲಾಖೆಯೊಂದಿಗೆ ಮೀಫ್ ಕೈ ಜೋಡಿಸಲಿದೆ ಎಂದರು.
ಶಿಬಿರವನ್ನು ಉದ್ಘಾಟಿಸಿದ ರಾಷ್ಟ್ರೀಯ ತರಬೇತುದಾರ ಪ್ರೊಫೆಸರ್ ರಾಜೇಂದ್ರ ಭಟ್ ಮಾತನಾಡಿ, ಮನ್ಶರ್ ವಿದ್ಯಾಸಂಸ್ಥೆಯು ಮಾದರಿ ಸಂಸ್ಥೆಯಾಗಿದ್ದು, ಅಸ್ಸೈಯದ್ ಉಮರ್ ಫಾರೂಕ್
ತಂಙಳ್ ಅವರ ಸಾಮಾಜಿಕ ಮತ್ತು ಧಾರ್ಮಿಕ ನೇತೃತ್ವ ಇಲ್ಲಿನ ವಿದ್ಯಾರ್ಥಿಗಳನ್ನು ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಲು ಸಹಕಾರಿ ಎಂದರು.
ಮುಖ್ಯ ಅತಿಥಿಗಳಾಗಿ ಮೀಫ್ ಉಪಾಧ್ಯಕ್ಷ ಮುಸ್ತಫ ಸುಳ್ಯ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮೀಫ್ ಪ್ರೋಗ್ರಾಮ್ ಸೆಕ್ರೆಟರಿ ಶಾರಿಕ್ ಕುಂಜತ್ತಬೈಲು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ನಝೀರ್ ಉಪಸ್ಥಿತರಿದ್ದರು.
ಮನ್ಶರ್ ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ಧಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ರಶೀದ್ ಕುಪ್ಪೆಟ್ಟ ವಂದಿಸಿದರು.
ಶಾಲಾ ಶಿಕ್ಷಕಿಯಾದ ಉಷಾ ಮತ್ತು ಗೌತಮಿ ಶರಣ್ ಕಾರ್ಯಕ್ರಮ ನಿರೂಪಿಸಿದರು. ಮೀಫ್ ವ್ಯವಸ್ಥಾಪಕ ಅಮೀನ್ ಸಹಕರಿಸಿದರು.
ಶಿಬಿರದಲ್ಲಿ ಬೆಳ್ತಂಗಡಿ ತಾಲೂಕಿನ ಖಾಸಗಿ ಅನುದಾನರಹಿತ ಮೀಫ್ ಶಿಕ್ಷಣ ಸಂಸ್ಥೆಯಿಂದ ಮತ್ತು ಅನುದಾನಿತ ಹಾಗೂ ಸರಕಾರಿ ಸ್ಥಳೀಯ ಕನ್ನಡ ಮಾಧ್ಯಮ ಶಾಲೆಯ ಸುಮಾರು 350ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಷ್ಟ್ರೀಯ ತರಬೇತುದಾರ ಮತ್ತು ಟಿ.ವಿ. ಚಾನಲ್ ನಿರೂಪಕ ಪ್ರೊ.ರಾಜೇಂದ್ರ ಭಟ್ ಕಾರ್ಕಳ ದಿನಪೂರ್ತಿ ಪ್ರಾತ್ಯಕ್ಷಿಕೆಯೊಂದಿಗೆ ವಿಷಯವಾರು ಮತ್ತು ಪ್ರೇರಣಾ ಶಿಬಿರ ನಡೆಸಿದರು.