ಹೆಣ್ಣುಮಕ್ಕಳು ಸರಕಾರದ ಹುದ್ದೆಗಳಲ್ಲಿ ಹೆಚ್ಚು ಸೇರಲು ಪ್ರೇರಣೆ ನೀಡಬೇಕು: ಪ್ರೊ.ಬಿ. ಎ.ವಿವೇಕ ರೈ
ಮಂಗಳೂರು: ಹೆಣ್ಣು ಮಕ್ಕಳು ಸರಕಾರದ ಹುದ್ದೆಗಳಲ್ಲಿ ಸೇರಲು ಪ್ರೇರಣೆ ನೀಡಬೇಕು ಬದುಕು ರೂಪಿಸಿಕೊಳ್ಳಲು ಅದು ಅವರಿಗೆ ಸಹಾಯವಾಗುತ್ತದೆ.ಈ ನಿಟ್ಟಿನಲ್ಲಿ ಸರಕಾರಿ ಉದ್ಯೋಗಿಯಾಗಿ ಬದುಕು ರೂಪಿಸಿಕೊಂಡ ದಿ ಬೋಳಾರ ಉಮಾವತಿ ಶೆಟ್ಟಿ (ಉಮ್ಮಕ್ಕೆ) ಅವರು ನಮಗೆಲ್ಲಾ ಮಾದರಿಯಾಗುತ್ತಾರೆ ಎಂದು ಖ್ಯಾತ ಹಿರಿಯ ವಿದ್ವಾಂಸ, ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಹೇಳಿದರು.
ತೋಟಗಾರಿಕಾ ಇಲಾಖೆ, ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ದಿ.ಬೋಳಾರ ಉಮಾವತಿ ಶೆಟ್ಟಿ ಅವರ ನೆನಪಿ ಗಾಗಿ ಸ್ಥಾಪನೆಯಾಗಿರುವ, ಉಮ್ಮಕ್ಕೆ ನೆಂಪುಕೂಟ ಚಾರಿಟೇಬಲ್ ಟ್ರಸ್ಟ್ ವತಿಯಿಂದ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಸಹಯೋಗ ದೊಂದಿಗೆ ರವಿವಾರ ಉರ್ವಸ್ಟೋರಿನ ಕರಾವಳಿ ಲೇಖಕಿಯರ ಮತ್ತುವಾಚಕಿಯರ ಸಂಘದ ಸಾಹಿತ್ಯ ಸದನದ ಸಭಾಂಗಣದಲ್ಲಿ ನಡೆದ ಉಮ್ಮಕ್ಕೆನ ನೆಂಪು ‘ಕೂಡುಕಟ್ಟ್ದ ಪಾತೆರಕತೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕಾ ಇಲಾಖೆ, ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬದುಕು ರೂಪಿಸಿದ ದಿ ಬೋಳಾರ ಉಮಾವತಿ ಶೆಟ್ಟಿ (ಉಮ್ಮಕ್ಕೆ) ಅವರು ನಮಗೆಲ್ಲಾ ಮಾದರಿ,ಅವರ ಕೆಲಸದಿಂದ ಪ್ರೇರಣೆ ಪಡೆದು ನಾವು ಮುನ್ನಡೆಯಬೇಕು ನಮ್ಮ ಸಮಾಜದಲ್ಲಿ ಈ ರೀತಿಯಾಗಿ ಬದುಕು ಕಟ್ಟುವ ಕೆಲಸ ಕುಟುಂಬವನ್ನು ಮುನ್ನಡೆಸುತ್ತಿರುವ ಸಾಕಷ್ಟು ಮಹಿಳೆ ಯರಿಂದ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ವಿದ್ಯಾರ್ಜನೆಗೆ ಶಾಲೆ ಎಂಬ ಕಲ್ಪನೆ ನೀಡಿದ್ದು, ಕುದ್ಮುಲ್ ರಂಗರಾಯರು. ಹೆಣ್ಣುಮಕ್ಕಳು ಕಲಿಕೆಯಲ್ಲಿ ಮುಂದೆ ಬರಬೇಕು ಎಂದು ವಸತಿ ನಿಲಯ, ಶಾಲೆಗಳನ್ನು ಆರಂಭಿಸಿ ಮಾದರಿಯಾದರು. ಆದರೆ, ಈಗ ಶಿಕ್ಷಣದಲ್ಲಿ ಮುಂದು ವರೆದ-ಹಿಂದುಳಿದ, ಸರಕಾರಿ-ಖಾಸಗಿ ಎಂಬ ಕಲ್ಪನೆ ಬಂದಿದೆ. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಆ ರೀತಿಯ ಕಲ್ಪನೆಯೇ ಇರಲಿಲ್ಲ ಎಂದರು.
ಸರಕಾರಗಳು ಬದಲಾದರೂ ಶಿಕ್ಷಣದ ಬಗ್ಗೆ ಧೋರಣೆ ಬದಲಾ ಗಿಲ್ಲ. ಸರಕಾರಿ ಶಾಲೆಗಳನ್ನು ಉಳಿಸಲು ನಾವೆಲ್ಲರೂ ಮುಂದಾಗಬೇಕು. ಸರಕಾರವನ್ನು ಅವಲಂಭಿಸದೆ ಸಹಕಾರ ಮಾಡಬೇಕು ಎಂದು ತಿಳಿಸಿದರು.
ಕಳೆದ ಶತಮಾನದ ಹೆಣ್ಣು ಮಕ್ಕಳ ಓದು ಬರಹದ ಸ್ಥಿತಿಗತಿ ಬಗ್ಗೆ ಚಿತ್ರದುರ್ಗದ ಸರಕಾರಿ ಕಲಾ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಡಾ ತಾರಿಣಿ ಶುಭದಾಯಿನಿ ಅವರು ಉಮ್ಮಕ್ಕೆ ದತ್ತಿ ಉಪನ್ಯಾಸವನ್ನು ನೀಡಿದರು. 2024ರ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕನ್ನಡ ಮಾಧ್ಯಮದಲ್ಲಿ ಓದಿರುವ ಮೂವರು ವಿದ್ಯಾರ್ಥಿನಿಯರಿಗೆ ಉಮ್ಮಕ್ಕೆ ನೆನಪು ಧನಸಹಾಯ ದೇಣಿಗೆಯನ್ನು ನೀಡಲಾಯಿತು. ಉಮ್ಮಕ್ಕೆ ಓದಿರುವ ಜಪ್ಪು ಮಂಗಳೂರಿನ ಕಾಸ್ಸಿಯಾ ಹೈಸ್ಕೂಲಿನ ವಿದ್ಯಾರ್ಥಿನಿ ಮೈತ್ರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿನಿ ಸೌಜನ್ಯ ರೈ ಮತ್ತು ಉಡುಪಿ ಜಿಲ್ಲೆಯ ಬಾಲಕಿಯರ ಸರಕಾರಿ ಪ.ಪೂ ಕಾಲೇಜಿನ ಮಾನ್ಯಶ್ರೀ ಅವರಿಗೆ ತಲಾ ಹತ್ತು ಸಾವಿರವನ್ನು ಸ್ಮರಣಿಕೆಯೊಂದಿಗೆ ನೀಡಿ ಅವರ ಶೈಕ್ಷಣಿಕ ಬೆಳವಣಿಗೆಗೆ ಉತ್ತೇಜನ ನೀಡಲಾಯಿತು.
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಪ್ರೊ.ಶಿವರಾಮ ಶೆಟ್ಟಿಯವರು ತಮಗೆ ಕರ್ನಾಟಕ ಸರಕಾರ( ಪ್ರೊ ಬಿ. ಶಿವರಾಮ ಶೆಟ್ಟಿ) ನೀಡಿರುವ 2022-23ನೇ ಸಾಲಿನ ಕನಕಶ್ರೀ ಪ್ರಶಸ್ತಿಯ ಪುರಸ್ಕಾರ 5 ಲಕ್ಷ ರೂಪಾಯಿ ಮೊತ್ತವನ್ನು ಉಮ್ಮಕ್ಕೆ ನೆಂಪು ಚಾರಿಟೇಬಲ್ ಟ್ರಸ್ಟಿಗೆ ಹಸ್ತಾಂತರಿಸಿದರು.ಈ ಮೊತ್ತವನ್ನು ಟ್ರಸ್ಟಿನಲ್ಲಿ ಠೇವಣಿಯಾಗಿರಿಸಿ, ಬರುವ ಬಡ್ಡಿ ಮೊತ್ತವನ್ನು ಸಮಾಜ, ಶಿಕ್ಷಣ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹನೀಯರಿಗೆ, ಸಂಘ ಸಂಸ್ಥೆ ಗಳಿಗೆ ‘ಸಂತಕವಿ ಕನಕದಾಸ’ರ ಹೆಸರಲ್ಲಿ ನೀಡಿ ಸಮಾಜ ಸೇವೆಗೆ ಉತ್ತೇಜನವನ್ನು ನೀಡಲಾಗುವುದು ಎಂದು ಶಿವರಾಮ ಶೆಟ್ಟಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಮಾಜಿ ಅಧ್ಯಕ್ಷೆ ಜ್ಯೋತಿ ಚೇಳಾರು, ಖ್ಯಾತ ಕಲಾವಿದ ಮೈಮ್ ರಮೇಶ್ ಮತ್ತು ತಂಡದವರಿಂದ ವಚನ, ತತ್ವಪದ, ಕೀರ್ತನೆ, ಭಾವಗೀತೆಗಳ ಪದರಂಗಿತ ನಡೆಯಿತು. ಅಕ್ಷತಾ ರಾಜ್ ಪೆರ್ಲ ನಿರ್ವಹಿಸಿದರು. ರತ್ನಾವತಿ ಬೈಕಾಡಿ ಆಶಯ ಗೀತೆ ಹಾಡಿದರು.