ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ: ದಿನೇಶ್ ಗುಂಡೂರಾವ್ ಆರೋಪ
ಮಂಗಳೂರು, ಆ.2: ಮೈಸೂರು ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸರಕಾರದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಸಿದ್ದರಾಮಯ್ಯರನ್ನು ಹೇಗಾದರೂ ಸಿಲುಕಿಸಬೇಕಿದೆ. ಸಿಎಂ ವಿರುದ್ಧ ದೂರು ನೀಡಿರುವ ಟಿ.ಜೆ.ಅಬ್ರಹಾಂ ಹಿನ್ನೆಲೆ ನಿಮಗೆ ಗೊತ್ತಿದೆ, ಅವರಿಗೆ ಸುಪ್ರೀಂ ಕೋರ್ಟ್ ಕೂಡ 20 ಲಕ್ಷ ರೂ. ದಂಡ ಹಾಕಿದೆ. ಅವರ ನೀಡಿರುವ ದೂರನ್ನು ಪಡೆದ ಕೆಲವೇ ಗಂಟೆಗಳಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಗೆ ಶೋಕಾಸ್ ನೊಟೀಸ್ ಮಾಡಿದ್ದಾರೆ. ಯಾವುದೇ ಕಾನೂನು ತಜ್ಞರ ಜೊತೆಗೂ ಅವರು ಚರ್ಚೆ ಮಾಡಿಲ್ಲ. ನೂರಾರು ಪುಟಗಳ ದೂರು ಪಡೆದು ಕೆಲವೇ ಗಂಟೆಗಳಲ್ಲಿ ನೊಟೀಸ್ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಪ್ರಕಾರ ಹೋಗಿ ಸಿದ್ದರಾಮಯ್ಯ ಏನು ತಪ್ಲು ಮಾಡಿದ್ದಾರೆ ತೋರಿಸಲಿ. ಸಿದ್ದರಾಮಯ್ಯ ಕಳೆದುಕೊಂಡ ಭೂಮಿ ವಾಪಸ್ ಪಡೆದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅವರ ಕಾನೂನಿನಡಿ ತಪ್ಪು ತೋರಿಸಲಿ. ಅಧಿಕಾರ ದುರುಪಯೋಗದ ಬಗ್ಗೆ ಅವರು ನಮಗೆ ತೋರಿಸಲಿ ಎಂದು ಸವಾಲು ಹಾಕಿದರು.
ಮೈಸೂರು ಮುಡಾದಲ್ಲಿ ಎಲ್ಲಾ ರಾಜಕೀಯ ನಾಯಕರು ಇದ್ದ ಬೋರ್ಡ್ ಇತ್ತು. ಆಗಲೂ ಅನೇಕ ಜನರಿಗೆ ಇವರು ಭೂಮಿ ಕೊಟ್ಟಿದ್ದಾರೆ. ಹಾಗಾಗಿ ಇವರ ಪಾದಯಾತ್ರೆಗೆ ಯಾವ ನೈತಿಕತೆ ಇದೆ? ಎಂದು ಗುಂಡೂರಾವ್ ಪ್ರಶ್ನಿಸಿದರು.
ಯಡಿಯೂರಪ್ಪರ ಮೇಲೆ ಪೊಕ್ಸೋ ಕೇಸ್ ನಡೀತಾ ಇದೆ. ವಿಜಯೇಂದ್ರ ಮೇಲೂ ಕೇಸ್ ಇದೆ, ಹೀಗಿರೋವಾಗ ಇವರಿಗೆ ಏನು ನೈತಿಕತೆ ಇದೆ. ನಾವು ಕೂಡ ಇದಕ್ಕೆ ಎಲ್ಲಾ ಕಡೆ ಉತ್ತರ ಕೊಡುತ್ತೇವೆ ಎಂದವರು ಹೇಳಿದರು.
ಪಾದಯಾತ್ರೆ ವಿಚಾರದಲ್ಲಿ ಅಧಿಕೃತವಾಗಿ ಅನುಮತಿ ಸಹಜವಾಗಿ ನೀಡುವುದಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಅವಕಾಶ ಇದೆ. ನಿರ್ಬಂಧ ವಿಧಿಸಿ ಅವರಿಗೆ ಪಾದಯಾತ್ರೆಗೆ ಅವಕಾಶ ಕೊಡಲಾಗುತ್ತದೆ ಎಂದು ಬಿಜೆಪಿ ಪಾದಯಾತ್ರೆ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.