‘ಕೊರೋನ ಬಳಿಕ ಅನುದಾನ ಸರಿಯಾಗಿ ಬರುತ್ತಿಲ್ಲ’: ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಆಶ್ರಮ ಮುಖ್ಯಸ್ಥರ ಮನವಿ
ಮಂಗಳೂರು: ಅಲ್ಪಸಂಖ್ಯಾತ ಸಂಸ್ಥೆಗಳಿಂದ ನಡೆಸಲ್ಪಡುವ ಆಶ್ರಮಗಳಿಗೆ ಸರಕಾರದಿಂದ ನೀಡಲಾಗುವ ಅನುದಾನ ಕೊರೋನ ಬಳಿಕ ಸಮಪರ್ಕವಾಗಿಲ್ಲ. ಬೆಲೆಏರಿಕೆಯಿಂದ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರೂ ಅನುದಾನದಲ್ಲಿ ಕಡಿತ ದಿಂದಾಗಿ ಆಶ್ರಮಗಳಲ್ಲಿರುವ ವಯೋವೃದ್ಧರು, ವಿಕಲಚೇತನರ ಯೋಗಕ್ಷೇಮಕ್ಕೆ ತೊಂದರೆಯಾಗುತ್ತಿದೆ. ಅನುದಾನದ ಕ್ಲಪ್ತ ಸಮಯದಲ್ಲಿ ಒದಗಿಸುವ ಜತೆಗೆ ಅನುದಾನ ಮೊತ್ತ ಹೆಚ್ಚಳಕ್ಕೆ ಸರಕಾರಕ್ಕೆ ಶಿಫಾರಸು ಮಾಡುವಂತೆ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಿಗೆ ದ.ಕ. ಜಿಲ್ಲೆಯ ವಿವಿಧ ಆಶ್ರಮಗಳ ಮುಖ್ಯಸ್ಥರಿಂದ ಮನವಿ ಸಲ್ಲಿಕೆಯಾಗಿದೆ.
ದ.ಕ.ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರ ಅಧ್ಯಕ್ಷತೆಯಲ್ಲಿ ಕುಂದು ಕೊರತೆ ಸಭೆ ನಡೆಯಿತು.
‘25 ವರ್ಷಗಳಿಂದ ನಡೆಸಲ್ಪಡುವ ನಮ್ಮ ಆಶ್ರಮದಲ್ಲಿ 281 ಮಂದಿ ಮಾನಸಿಕ, ವಿಕಲಚೇತನರಿದ್ದಾರೆ. ಅವರ ಚಿಕಿತ್ಸೆ, ಆಹಾರ, ಅವರನ್ನು ನೋಡಿಕೊಳ್ಳಲು ಸಿಬ್ಬಂದಿ ವೇತನ ಸೇರಿದಂತೆ ಸರಕಾರದಿಂದ ಪ್ರಸ್ತುತ ಸಿಗುತ್ತಿರುವ ಅನುದಾನದ ಖರ್ಚುವೆಚ್ಚ ಸರಿತೂಗಿಸಲು ಕಷ್ಟಸಾಧ್ಯವಾಗುತ್ತಿಲ್ಲ. ಈ ವರ್ಷದ ಬಜೆಟ್ ಇನ್ನೂ ಬಂದಿಲ್ಲ. ಇದರಿಂದ ತೊಂದರೆಯಾಗು ತ್ತಿದೆ ಎಂದು ಬೆಳ್ತಂಗಡಿಯ ಸಿಯೋನ್ ಆಶ್ರಮದ ಯು.ಸಿ. ಪೌಲಾಸ್ ವಿವರ ನೀಡಿದರು.
ಜೆಪ್ಪು ಪ್ರಶಾಂತಿ ನಿಲಯದ ಭಗಿನಿ ಡೋರತಿ ಸಲ್ಡಾನ ಮಾತನಾಡಿ, ನಮ್ಮಲ್ಲಿ 300 ಮಂದಿ ನಿರ್ಗತಿಕರಿಗೆ ಆಶ್ರಯ ನೀಡಲಾಗಿದ್ದು, ಕೊರೋನ ಬಳಿಕ ಸರಕಾರದಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಕೇಂದ್ರದಿಂದ ಅಕ್ಕಿ ಗೋಧಿ ಬರುತ್ತಿದೆ. 22-23ನೆ ಸಾಲಿನ ಅನುದಾನದಲ್ಲಿ ಶೇ. 50ರಷ್ಟು ಮಾತ್ರವೇ ಬಂದಿದೆ ಎಂದರು.
ಅಲ್ಪಸಂಖ್ಯಾತ ಸಮುದಾಯಕ್ಕೆ ಅನುದಾನದಲ್ಲಿ ತಾರತಮ್ಯ ಆರೋಪ
ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ಅಲ್ಪಸಂಖ್ಯಾತ ಇಲಾಖೆಯ ಅನುದಾನ 3000 ಕೋಟಿ ರೂ.ಗಳಿಂದ ಕಳೆದ ಅವಧಿಯಲ್ಲಿ 700 ಕೋಟಿ ರೂ.ಗಳಿಗೆ ಇಳಿಕೆಯಾಗಿತ್ತು. ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಅರಿವು ಯೋಜನೆ ಸ್ಥಗಿತಗೊಂಡಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರಕಾರ ನಿಲ್ಲಿಸಿದೆ. ಮೆಟ್ರಿಕ್ ನಂತರದ ಅರ್ಜಿ ಸಲ್ಲಿಸಲು ಈ ವರ್ಷ ಅವಕಾಶವೇ ಇನ್ನೂ ಆರಂಭವಾಗಿಲ್ಲ. ಕಳೆದ ವರ್ಷದ ವಿದ್ಯಾರ್ಥಿ ವೇತನ ಇನ್ನೂ ಬಿಡುಗಡೆಯೇ ಆಗಿಲ್ಲ. ಪ್ಯಾರಾ ಮೆಡಿಕಲ್ ಕೋರ್ಸ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಮೊತ್ತವನ್ನು ತಡೆ ಹಿಡಿಯಲಾಗಿದೆ. ವಿದ್ಯಾಸಿರಿ ಯೋಜನೆಯಡಿ ಹಾಸ್ಟೆಲ್ ಪ್ರವೇಶ ಸಿಗದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ನೀಡಲಾಗುವ ಮೊತ್ತವೂ ಸಿಗುತ್ತಿಲ್ಲ. ಸಾಗರೋತ್ತರ ವಿದ್ಯಾಭ್ಯಾಸದ ವಿದ್ಯಾರ್ಥಿ ವೇತನಕ್ಕೆ 205 ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 18 ಜನರಿಗೆ ಮಾತ್ರವೇ ದೊರಕಿದೆ. ಇದಕ್ಕಾಗಿ ಶೇ. 83 ಅಂಕಗಳ ಮಾನದಂಡದ ಮೂಲಕ ಬಡ ವರ್ಗದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಸಾಗರೋತ್ತರ ವಿದ್ಯಾಭ್ಯಾಸದ ಕನಸನ್ನು ಕಸಿಯಲಾಗಿದೆ. ಶಾದಿ ಭಾಗ್ಯ ಯೋಜನೆ ಸ್ಥಗಿತಗೊಂಡಿದೆ. ಶಾದಿಮಹಲ್ ಕಟ್ಟಡ ಅರ್ಧಕ್ಕೆ ಸ್ಥಗಿತಗೊಂಡಿದೆ. ಶ್ರಮಶಕ್ತಿ, ಗಂಗಾಕಲ್ಯಾಣ ಯೋಜನೆಗಳಿಂದ ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಯೋಜನ ದೊರಕುತ್ತಿಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ ಅನುದಾನ ಹಂಚಿಕೆಯಲ್ಲಿ ತಾರಮತ್ಯ ಆಗುತ್ತಿದ್ದು, ಈ ಬಗ್ಗೆ ಸರಕಾರಗಳ ಗಮನ ಸೆಳೆಯಬೇಕು ಎಂದು ದೂರುಗಳ ಮಹಾಪೂರವನ್ನೇ ಬಿಚ್ಚಿಟ್ಟರು.
10000 ಕೋಟಿ ರೂ. ಬಜೆಟ್ ಘೋಷಣೆಯಾದರೆ ಸಮಸ್ಯೆ ಪರಿಹಾರ
ಈ ಸಂದರ್ಭ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್, ಕಾಲಕಾಲಕ್ಕೆ ಸರಕಾರಕ್ಕೆ ಅಗತ್ಯ ಶಿಫಾರಸು, ಸಲಹೆಗಳನ್ನು ನೀಡುವ ಕೆಲಸವನ್ನು ಆಯೋಗದಿಂದ ನಡೆಸಲಾಗುತ್ತಿದೆ. ಈ ಬಾರಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಲ್ಪಸಂಖ್ಯಾತರಿಗೆ 10000 ಕೋಟಿ ರೂ. ನೀಡುವುದಾಗಿ ಹೇಳಿದ್ದು, ಅದರಂತೆ ಬಜೆಟ್‌ನಲ್ಲಿ ಘೋಷಣೆಯಾದರೆ ಸಮಸ್ಯೆಗಳು ಬಗೆಹರಿಯಲಿದೆ. ಆಯೋಗದ ಪ್ರಾದೇಶಿಕ ವಿಭಾಗ ಕಚೇರಿಯನ್ನು ತೆರೆಯಲು ಕೂಡಾ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಯೂಸುಫ್ ವಿಟ್ಲ, ಮುನೀರ್ ಆತೂರು, ಆಲ್ಪ್ರೆಡ್ ಫೆರ್ನಾಂಡಿಸ್, ಎ.ಕೆ. ಹ್ಯಾರಿಸ್ ಮೊದಲಾದವರು ವಿವಿಧ ಸಮಸ್ಯೆಗಳನ್ನು ವಿವರಿಸಿದರು.
ಸಭೆಯಲ್ಲಿ ಆಯೋಗದ ಕಾರ್ಯದರ್ಶಿ ಮುಜೀಬುಲ್ಲಾ ಜಫಾರಿ, ಜಿ.ಪಂ. ಉಪ ಕಾರ್ಯದರ್ಶಿ ರಘು, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೊಟ್ಟಾರಿ, ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಹಾಗೂ ಆಯೋಗದ ಸದಸ್ಯರು ಉಪಸ್ಥಿತರಿದ್ದರು.
‘ಕ್ರೈಸ್ತ, ಮುಸಲ್ಮಾನ, ಬೌದ್ಧ, ಜೈನ, ಪಾರ್ಸಿ, ಸಿಖ್ ಸಮುದಾಯಗಳು ಅಲ್ಪಸಂಖ್ಯಾತ ಆಯೋಗದ ವ್ಯಾಪ್ತಿಗೊಳ ಪಡುತ್ತಾರೆ. ಗುರುನಾನಕ ಜಯಂತಿ ಹಿನ್ನೆಲೆಯಲ್ಲಿ ಇಂದು ಮಂಗಳೂರಿನ ಗುರುದ್ವಾರಕ್ಕೂ ಭೇಟಿ ನೀಡಿದ್ದೇನೆ. ಆದರೆ ಕುಂದುಕೊರತೆ ಸಭೆಗಳಲ್ಲಿ ಎಲ್ಲಾ ಸಮುದಾಯಗಳ ಜನರು ಭಾಗವಹಿಸುವುದು ಕಾಣಿಸುತ್ತಿಲ್ಲ. ಮಂಗಳೂರಿನ ಜನ ಶಿಸ್ತಿನ ಸಿಪಾಯಿಗಳು,ಬುದ್ಧಿವಂತರು ಜತೆಗೆ ಧಾರ್ಮಿಕ ವಿಷಯಗಳಲ್ಲಿ ಅತೀ ಬೇಗವಾಗಿ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಇದು ಕೋಮುಗಲಭೆಗಳಿಗೆ ಕಾರಣವಾಗುತ್ತಿದ್ದು, ತಾಳ್ಮೆ ಕಳೆದುಕೊಳ್ಳದಂತೆ ವರ್ತಿಸುವುದು ಅತೀ ಅಗತ್ಯ. ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು.’
*ಅಬ್ದುಲ್ ಅಜೀಮ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ