ದೇವರಾಜ ಅರಸು ದೂರದೃಷ್ಟಿತ್ವದಿಂದ ರಾಜ್ಯದಲ್ಲಿ ಮಹತ್ತರ ಬದಲಾವಣೆ: ಡಿಸಿ ಮುಲ್ಲೈ ಮುಗಿಲನ್

ಮಂಗಳೂರು, ಆ.20: ದಲಿತರು, ಹಿಂದುಳಿದವರ ಸಹಿತ ಸಮಾಜದಲ್ಲಿ ಬಲ ಇಲ್ಲದವರಿಗೆ ಭೂ ಸುಧಾರಣೆ ಕಾಯ್ದೆಯ ಮೂಲಕ ಉಳುಮೆಗೆ ಭೂಮಿ ಒದಗಿಸಿಕೊಡುವ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಏಳಿಗೆಗೆ ಕಾರಣ ರಾದ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಸದಾ ಸ್ಮರಣೀಯರಾಗಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹೇಳಿದರು.
ದ.ಕ.ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಕೊಟ್ಟಾರದಲ್ಲಿರುವ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ರವಿವಾರ ನಡೆದ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಹಲವು ಕಾರ್ಯಕ್ರಮಗಳಿಂದಾಗಿ ರಾಜ್ಯದಲ್ಲಿಂದು ಮಹತ್ತರ ಬದಲಾವಣೆ ಗಳಾಗಿವೆ. ಆ ಮೂಲಕ ಹಿಂದುಳಿದ ವರ್ಗದವರು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಲ್ಲರೊಂದಿಗೆ ಸರಿಸಮನಾಗಿ ನಿಲ್ಲಲು ಸಾಧ್ಯವಾಗಿದೆ ಎಂದು ಡಿಸಿ ಅಭಿಪ್ರಾಯಪಟ್ಟರು.
ದೇಶದಲ್ಲೇ ಅಧುನಿಕ, ಅರ್ಥಿಕ, ಶೈಕ್ಷಣಿಕವಾಗಿ ಮುಂದುವರಿದ ರಾಜ್ಯವಾಗಿ ಕರ್ನಾಟಕ ಮೂಡಿಬರಲು ದೇವರಾಜ ಅರಸು ಅವರ ದೂರದೃಷ್ಟಿತ್ವವೇ ಕಾರಣವಾಗಿವೆ. ಹಳ್ಳಿ ಹಳ್ಳಿಗಳಲ್ಲಿ ಶಾಲೆ, ಶಿಕ್ಷಣವನ್ನು ಪರಿಣಾಮಕಾರಿಯಾಗಿ ರೂಪಿಸಲು ಹಿಂದು ಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳ ನಿರ್ಮಾಣಗಳು ದೇವರಾಜ ಅರಸು ಚಿಂತನೆ ಫಲಗಳಾಗಿವೆ ಎಂದು ಡಿಸಿ ಮುಲ್ಲೈ ಮುಗಿಲನ್ ಹೇಳಿದರು.
ದೇವರಾಜ ಅರಸು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಡಾ.ಅಣ್ಣಯ್ಯ ಕುಲಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ದ್ದರು. ದ.ಕ.ಜಿಪಂ ಸಿಇಒ ಡಾ. ಆನಂದ್ ಕೆ. ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಭಾಗವಹಿಸಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿದರು.
*ಈ ಸಂದರ್ಭ ಸದ್ಭಾವನಾ ದಿನದ ಪ್ರತಿಜ್ಞೆಯನ್ನು ಜಿಲ್ಲಾಧಿಕಾರಿ ಬೋಧಿಸಿದರು. ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು, ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮೆಡಿಕಲ್ ಇಂಜಿನಿಯರಿಂಗ್ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಲಾಯಿತು. ಕ್ರೀಡೆ ಸಹಿತ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.