ಗೃಹಲಕ್ಷ್ಮಿ ಯೋಜನೆ: ದ.ಕ.ಜಿಲ್ಲೆಯಲ್ಲಿ 5,621 ಅರ್ಜಿ ಸಲ್ಲಿಕೆ

ಮಂಗಳೂರು, ಜು.21: ರಾಜ್ಯ ಸರಕಾರದ ಮಹತ್ವದ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಗೆ ಶುಕ್ರವಾರ ದ.ಕ.ಜಿಲ್ಲೆಯಲ್ಲಿ ಸ್ಪಂದನ ವ್ಯಕ್ತವಾಗಿದ್ದು. ‘ಗ್ರಾಮ ಒನ್ ಕೇಂದ್ರ’ಗಳಲ್ಲಿ 5,621 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಮೊದಲ ದಿನವಾದ ಗುರುವಾರ ಸರ್ವರ್ ಸಮಸ್ಯೆಯಿಂದ ದ.ಕ.ಜಿಲ್ಲೆಯಲ್ಲಿ ಕೇವಲ 1,217 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿತ್ತು. ಎರಡನೇ ದಿನವಾದ ಶುಕ್ರವಾರ ಸರ್ವರ್ ಡೌನ್ ಆಗಿದ್ದರೂ ಕೂಡ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿವೆ. ಜಿಲ್ಲೆಯ 223 ಗ್ರಾಪಂ, 60 ಸ್ಥಳೀಯ ಸಂಸ್ಥೆಗಳು, 179 ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಬಂಟ್ವಾಳದ 43 ಕೇಂದ್ರಗಳಲ್ಲಿ 1,256 ಅರ್ಜಿಗಳು, ಬೆಳ್ತಂಗಡಿಯ 31 ಕೇಂದ್ರಗಳಲ್ಲಿ 1,026, ಕಡಬದ 20 ಕೇಂದ್ರಗಳಲ್ಲಿ 757 ಅರ್ಜಿಗಳು, ಮಂಗಳೂರಿನ 16 ಕೇಂದ್ರಗಳಲ್ಲಿ 692 ಅರ್ಜಿಗಳು, ಮೂಡುಬಿದಿರೆಯ 6 ಕೇಂದ್ರಗಳಲ್ಲಿ 312 ಅರ್ಜಿಗಳು, ಮುಲ್ಕಿಯ 4 ಕೇಂದ್ರಗಳಲ್ಲಿ 216 ಅರ್ಜಿಗಳು, ಪುತ್ತೂರಿನ 25 ಕೇಂದ್ರಗಳಲ್ಲಿ 467 ಅರ್ಜಿಗಳು, ಸುಳ್ಯದ 15 ಕೇಂದ್ರಗಳಲ್ಲಿ 406 ಅರ್ಜಿಗಳು, ಉಳ್ಳಾಲದ 19 ಕೇಂದ್ರಗಳಲ್ಲಿ 489 ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ 1,257 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 1,028 ಅರ್ಜಿಗಳು ಆನ್‌ಲೈನ್ ಮೂಲಕ ನೋಂದಣಿಯಾಗಿವೆ. ಮಂಗಳೂರು ಮಹಾನಗರ ಪಾಲಿಕೆಯ 22 ಕೇಂದ್ರಗಳಲ್ಲಿ 195 ಅರ್ಜಿಗಳು, ಪುತ್ತೂರು ನಗರಸಭೆಯ 5 ಕೇಂದ್ರಗಳಲ್ಲಿ 30 ಅರ್ಜಿಗಳು, ಉಳ್ಳಾಲ ನಗರಸಭೆಯ 6 ಕೇಂದ್ರಗಳಲ್ಲಿ 489 ಅರ್ಜಿಗಳು, ಬಂಟ್ವಾಳ ಪುರಸಭೆಯ 3 ಕೇಂದ್ರಗಳಲ್ಲಿ 76 ಅರ್ಜಿಗಳು, ಮೂಡುಬಿದಿರೆ ಪುರಸಭೆಯ 3 ಕೇಂದ್ರ ಗಳಲ್ಲಿ 78 ಅರ್ಜಿಗಳು, ಸೋಮೇಶ್ವರ ಪುರಸಭೆಯ 4 ಕೇಂದ್ರಗಳಲ್ಲಿ 25 ಅರ್ಜಿಗಳು, ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ 3 ಕೇಂದ್ರಗಳಲ್ಲಿ 20 ಅರ್ಜಿಗಳು, ಮುಲ್ಕಿಯ 2 ಕೇಂದ್ರಗಳಲ್ಲಿ 22 ಅರ್ಜಿಗಳು, ಸುಳ್ಯದ 2 ಕೇಂದ್ರಗಳಲ್ಲಿ 83 ಅರ್ಜಿಗಳು, ವಿಟ್ಲದ 2 ಕೇಂದ್ರಗಳಲ್ಲಿ 26 ಅರ್ಜಿಗಳು, ಕೋಟೆಕಾರ್ ಪಟ್ಟಣ ಪಂಚಾಯತ್‌ನ 2 ಕೇಂದ್ರಗಳಲ್ಲಿ 5 ಅರ್ಜಿಗಳು, ಕಡಬದ 2 ಕೇಂದ್ರಗಳಲ್ಲಿ 30 ಅರ್ಜಿಗಳು, ಬಜಪೆ ಪಟ್ಟಣ ಪಂಚಾಯತ್‌ನ 2 ಕೇಂದ್ರಗಳಲ್ಲಿ 111 ಅರ್ಜಿಗಳು, ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ 2 ಕೇಂದ್ರಗಳಲ್ಲಿ 67 ಅರ್ಜಿಗಳು ಶುಕ್ರವಾರ ಸಲ್ಲಿಕೆಯಾಗಿವೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಿರುಸು ಪಡೆಯುತ್ತಿವೆಯಾದರೂ ಕೂಡ ಕೆಲವು ಕಡೆಗಳಲ್ಲಿ ಸರ್ವರ್ ಡೌನ್ ಸಮಸ್ಯೆಯಾಗುತ್ತಿವೆ ಎಂದು ಅರ್ಜಿದಾರರು ದೂರಿದ್ದಾರೆ.