ಆ.30ರಂದು ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಚಾಲನೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
ಮಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 90 ದಿನಗಳಲ್ಲಿ ಮೂರು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ. ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಗೆ ಆ.30ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಯುವನಿಧಿ ಡಿಸೆಂಬರ್‌ನಲ್ಲಿ ಜಾರಿಗೊಳಿಸಲಾಗುವುದು. ನಾವು ನುಡಿದಂತೆ ನಡೆದಿದ್ದೇವೆ. ಗೆದ್ದುಕೊಂಡಿದ್ದೇವೆ ಎಂದು ಬೀಗಲ್ಲ. ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಆದರೆ ಬಿಜೆಪಿ ನಾಯಕರು ಕಾಂಗ್ರೆಸ್‌ನ ಗ್ಯಾರಂಟಿಯ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರು ಗ್ಯಾರಂಟಿಗಳ ವಿರುದ್ಧ ಅಪಪ್ರಚಾರವನ್ನು ಮಾಡುತ್ತಾ ಸದನಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಅವರಿಗೆ ಹೆದರಿಕೆಯಾಗಿದೆ. ಎರಡೂ ಸದನದಲ್ಲೂ ತಮ್ಮ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಕೆಲಸವನ್ನು ಮಾಡಿಲ್ಲ ಎಂದರು.
ಉಡುಪಿ, ಮಂಗಳೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ: ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳನ್ನು ಗೆಲ್ಲಲಿದೆ. ಉಡುಪಿ ಮತ್ತು ಮಂಗಳೂರು ಕ್ಷೇತ್ರವನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳಲಿದೆ ಎಂದರು.
ಈ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲು ತಯಾರಿ ನಡೆಸಲಿದೆ. ಕೇಂದ್ರದಲ್ಲಿ ಇಂಡಿಯಾ ಸರಕಾರ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ನುಡಿದರು.
ಲೋಕಸಭಾ ಚುನಾವಣೆಗೆ ಪ್ರತಿಯೊಂದು ಕ್ಷೇತ್ರದ ಜವಾಬ್ದಾರಿಯನ್ನು ಓರ್ವ ಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕ ರೊಬ್ಬರಿಗೆ ಎಐಸಿಸಿ ನೀಡಲಿದೆ. ಇವರು ಪಕ್ಷದ ಸ್ಥಳೀಯ ನಾಯಕರನ್ನು ಭೇಟಿಯಾಗಿ ಅವರ ಅಭಿಪ್ರಾಯವನ್ನು ಪಡೆಯಲಿದ್ದಾರೆ. ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿ ವರದಿ ನೀಡಲಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ಆರು ತಿಂಗಳ ಮೊದಲೇ ಪ್ರತಿಯೊಂದು ಕ್ಷೇತ್ರಕ್ಕೂ ಅಭ್ಯರ್ಥಿಯ ಆಯ್ಕೆ ನಡೆಯಲಿದೆ ಎಂಬ ವಿಶ್ವಾಸವನ್ನು ಸಲೀಂ ಅಹ್ಮದ್ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಂದು ನಡೆದ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ. ಬಿಜೆಪಿಯಂತೆ ಚುನಾವಣೆಯನ್ನು ಮುಂದೂಡುವ ಕಾರ್ಯ ಮಾಡುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತೇವೆ. ನಾವು ಯಾರನ್ನು ಕೂಡ ಬಲವಂತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ನಮಗೆ ಸ್ಪಷ್ಟ ಬಹುಮತ ಇರುವುದರಿಂದ ಅದರ ಅಗತ್ಯ ನಮಗೆ ಇಲ್ಲ. ಆದರೆ ಬಿಜೆಪಿ ಅಥವಾ ಜೆಡಿಎಸ್‌ನ ನಾಯಕರು, ಶಾಸಕರನ್ನು ಪಕ್ಷಕ್ಕೆ ಸೇರಿಸುವ ವಿಚಾರದಲ್ಲಿ ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಲೀಂ ಅಹ್ಮದ್ ಹೇಳಿದರು.
ಸುಳ್ಳಿನ ವಿಚಾರದಲ್ಲಿ ಮೋದಿಗೆ ಆಸ್ಕರ್ ಪ್ರಶಸ್ತಿ: ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ. ಸುಳ್ಳಿನ ವಿಚಾರದಲ್ಲಿ ಆಸ್ಕರ್ ಪ್ರಶಸ್ತಿ ಕೊಡುವುದಾದರೆ ಅದು ಪ್ರಧಾನಿ ಮೋದಿ ಅವರಿಗೆ ನೀಡಬೇಕು. ಕಳೆದ ಒಂಬತ್ತುವರೆ ವರ್ಷದಲ್ಲಿ ಸುಳ್ಳುಗಳನ್ನೇ ಹೇಳಿಕೊಂಡು ಬಂದಿದ್ದಾರೆ. ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವ ಕೆಲಸ ಮಾಡುತ್ತೇನೆ ಎಂದವರು ಈಗ ಇಲ್ಲ ಎಂದು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್. ಲೋಬೊ, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಸುದರ್ಶನ ಜೈನ್, ಶಾಹುಲ್ ಹಮೀದ್, ಟಿಎಂ ಸಹೀದ್, ಸದಾಶಿವ ಉಳ್ಳಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.