ಹಳೆಯಂಗಡಿ: ಸೈಯ್ಯದ್ ಮೌಲಾನ ಕೇಂದ್ರ ಸಮಿತಿ ಮಹಾಸಭೆ, " ನಂಙಲೊ ಜಮಾತ್" ಕೌಟುಂಬಿಕ ಸ್ನೇಹ ಕೂಟ ಕಾರ್ಯಕ್ರಮ
ಹಳೆಯಂಗಡಿ: ಇಲ್ಲಿನ ಸೈಯ್ಯದ್ ಮೌಲಾನ ಕೇಂದ್ರ ಸಮಿತಿ ಸೌದಿ ಅರೆಬಿಯಾ ಇದರ ವಾರ್ಷಿಕ ಮಹಾ ಸಭೆ ಹಾಗೂ "ನಂಙಲೊ ಜಮಾತ್" ಕೌಟುಂಬಿಕ ಸ್ನೇಹ ಕೂಟವು ಸೌದಿ ಅರೆಬಿಯಾದ ಇಸ್ತಿರಾಹ್ ಟಿಎಂವೈಝೆಡ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಮಹಾಸಭೆಯಲ್ಲಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಕದಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹೀಂ ಹಳೆಯಂಗಡಿ, ಕೋಶಾಧಿಕಾರಿಯಾಗಿ ಶಮೀರ್ ಕಡಪುರ, ಉಪಾಧ್ಯಕ್ಷರಾಗಿ ಅಬ್ದುಲ್ ಸಲಾಂ ಮೂಡುತೋಟ, ಅಬ್ದುಲ್ ಸಮದ್ ಸಾಗ್, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಸಲಾಂ ಹಳೆಯಂಗಡಿ, ನಿಶಾದ್ ಸಾಗ್ ಆಯ್ಕೆಯಾದರು.
ಸಮಿತಿ ಸಲಹೆಗಾರರಾಗಿ ಜುನೈದ್ ಸಾಗ್, ಶಮೀಂ ಸಾಗ್, ಶಮೀಮ್ ಕದಿಕೆ, ಅಬ್ದುಲ್ ಅಝೀಝ್ ಮೂಡುತೋಟ ನೇಮಕಗೊಂಡರು.
ಸಭೆಯ ಬಳಿಕ ನಡೆದ " ನಂಙಲೊ ಜಮಾತ್" ಕೌಟುಂಬಿಕ ಸ್ನೇಹ ಕೂಟದಲ್ಲಿ ಖಮರುದ್ದೀನ್ ಗೂಡಿನಬಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಎಲ್ಲಾ ಜಮಾಅತ್ ಗಳು ಅನಿವಾಸಿ ಸಮಿತಿಗಳನ್ನು ರಚಿಸಿಕೊಳ್ಳಬೇಕು. ಈ ಮೂಲಕ ಜಮಾಅತ್ ಗೆ ಸಂಬಂಧಿಸಿದ ಕಾರ್ಯಕ್ರಮಗಳು, ಬಡವರ ಸಹಾಯಕ್ಕೆ ನಿಲ್ಲಬೇಕು. ಹಳೆಯಂಗಡಿಯ ಸೈಯ್ಯದ್ ಮೌಲಾನ ಸಮಿತಿ ಎಲ್ಲ ಜಮಾಅತ್‌ಗಳಿಗೂ ಮಾದರಿ ಎಂದರು.
ಸಮಿತಿಯ ಸಲಹೆಗಾರರಾದ ಅಬ್ದುಲ್ ಅಝೀಝ್ ಮೂಡುತೋಟ ಮಾತನಾಡಿ, ಸಮಿತಿ ನಡೆದು ಬಂದ ದಾರಿ, ಸಮಿತಿಯ ಕಾರ್ಯಕ್ರಮಗಳು ಹಾಗೂ ಮುಮದಿನ ಗುರಿಯನ್ನು ಮನವರಿಕೆ ಮಾಡಿದರು.
ಇದೇ ಸಂದರ್ಭ ಜಮಾಅತ್ ಗೆ ಒಳಪಡುವ ಯುವತಿಯರನ್ನು ವರಿಸಿರುವ ವರರನ್ನು ಸನ್ಮಾನಿಸಿ ಶುಭಹಾರೈಸುವ ಕಾರ್ಯಕ್ರಮ "ರಾಯತ್ತೊ ಪುದಿಯಾಂಪುಲೆ" ನೆರೆದವರ ಗಮನ ಸೆಳೆಯಿತು.
ಅಬ್ದುಲ್ ಸಲಾಂ ಹಳೆಯಂಗಡಿ ಸರ್ವರನ್ನೂ ಸ್ವಾಗತಿಸಿ, ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಂ ಹಳೆಯಂಗಡಿ ಕಾರ್ಯಕ್ರಮ ನಿರೂಪಿಸಿದರು.