ಹರೇಕಳ: ಕಸ ಸಂಗ್ರಹ ಶೀಘ್ರ ಆರಂಭಕ್ಕೆ ಡಿವೈಎಫ್‌ಐ ಮನವಿ
ಉಳ್ಳಾಲ, ಆ.27: ಹರೇಕಳ ಗ್ರಾಮದ ರಸ್ತೆಬದಿ ತ್ಯಾಜ್ಯ ತಡೆಯುವ ನಿಟ್ಟಿನಲ್ಲಿ ಶೀಘ್ರ ಕಸ ಸಂಗ್ರಹ ಕಾರ್ಯ ಆರಂಭಿಸು ವಂತೆ ಡಿವೈಎಫ್‌ಐ ಹರೇಕಳ ಗ್ರಾಮ ಸಮಿತಿತಯ ಗ್ರಾಪಂಗೆ ಮನವಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಹರೇಕಳ ಗ್ರಾಮ ಅಭಿವೃದ್ಧಿ ಕಾಣುತ್ತಿದ್ದು, ರಾಜ್ಯ ಮಟ್ಟದಲ್ಲೇ ಗುರುತಿಸಲ್ಪಟ್ಟಿದೆ. ಇದಕ್ಕೆ ಪಂಚಾಯತ್‌ನ ಹಿಂದಿನ ಆಡಳಿತ ಕೈಗೊಂಡ ಕೆಲವು ಉತ್ತಮ ಅಭಿವೃದ್ಧಿ ಕಾರ್ಯಗಳು ಕಾರಣವಾಗಿವೆ. ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಚ ಸಂಕೀರ್ಣ ನಿರ್ಮಿಸಲಾಗಿದ್ದು, ಜೂ.18ರಂದು ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಿದ್ದಾರೆ. ಮನೆ ಮನೆಗೆ ಹಸಿ ಮತ್ತು ಒಣಕಸ ಶೇಖರಣೆಗೆ ಬಕೆಟ್ ಮತ್ತು ಬೋರೋ ಬ್ಯಾಗ್ ವಿತರಿಸಲಾಗಿದೆ. ಕಸ ಸಂಗ್ರಹಕ್ಕೆ ವಾಹನವೂ ಇದೆ. ಗ್ರಾಮದಾದ್ಯಂತ ಸ್ವಚ್ಚತೆ ಕಾಪಾಡುವ ಹಾಗೂ ರಸ್ತೆಬದಿ ತ್ಯಾಜ್ಯ ಎಸೆಯದಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಪಂಚಾಯಿತಿ ಸೂಚನೆ ಪಾಲಿಸಲು ಗ್ರಾಮಸ್ಥರು ಬದ್ಧರಾಗಿದ್ದರೂ ಈವರೆಗೆ ಕಸ ಸಂಗ್ರಹ ಆರಂಭಗೊಳ್ಳದ ಕಾರಣ ಕಸ ವಿಲೇವಾರಿ ಮಾಡುವ ಬಗ್ಗೆ ಚಿಂತಿತರಾಗಿರಾಗಿದ್ದಾರೆ. ಮುಂದಕ್ಕೆ ಮತ್ತೆ ರಸ್ತೆಬದಿ ಕಸ ರಾಶಿ ಬಿದ್ದರೆ ಗ್ರಾಮದ ಘನತೆಗೆ ಕುಂದುಂಟಾಗಲಿದೆ. ಇದುವರೆಗೆ ಪಂಚಾಯತ್ ಆಡಳಿತ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಮನೆ ಮನೆ ಹಸಿ ಮತ್ತು ಒಣಕಸ ಸಂಗ್ರಹ ಆರಂಭಿಸು ವಂತೆ ಗ್ರಾಮಸ್ಥರ ಪರವಾಗಿ ಡಿವೈಎಫ್‌ಐ ನಿಯೋಗ ಮನವಿ ಮಾಡಿದೆ.
ಡಿವೈಎಫ್‌ಐ ಉಳ್ಳಾಲ ತಾಲೂಕು ಅಧ್ಯಕ್ಷ ರಫೀಕ್ ಹರೇಕಳ, ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಲಚ್ಚಿಲ್, ಕಾರ್ಯದರ್ಶಿ ರಿಝ್ವಾನ್ ಖಂಡಿಗ, ಕೋಶಾಧಿಕಾರಿ ಹನೀಫ್ ಪೋಡಾರ್ ಸೈಟ್, ಉಪಾಧ್ಯಕ್ಷ ಇಕ್ಬಾಲ್ ಕೆ.ಎಚ್., ಸದಸ್ಯರಾದ ಇಸ್ಮಾಯಿಲ್ ಆಲಡ್ಕ, ಹೈದರ್ ಆಲಡ್ಕ, ನಿಝಾಮ್ ಆಲಡ್ಕ ನಿಯೋಗದಲ್ಲಿದ್ದರು.