ಹರೇಕಳ: ಗ್ರಾಮೀಣ ಆರೋಗ್ಯ ಮತ್ತು ತರಬೇತಿ ಕೇಂದ್ರದ ಸೇವೆಗೆ ಯು.ಟಿ.ಖಾದರ್ ಚಾಲನೆ
ಕೊಣಾಜೆ: ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ನಮ್ಮೆಲ್ಲರ ಕನಸಾಗಬೇಕು. ಸರ್ಕಾರ, ಖಾಸಗಿ ಸಂಸ್ಥೆಗಳು, ಸ್ಥಳೀಯಾಡಳಿತ ಒಂದಾದರೆ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಎನ್ನುವುದಕ್ಕೆ ಹರೇಕಳ ಆರೋಗ್ಯ ಆಸ್ಪತ್ರೆ ತೋರಿಸಿಕೊಟ್ಟಿದ್ದು, ಇದೊಂದು ಮಾದರಿ ಖಾಸಗಿ ಸಹಭಾಗಿತ್ವ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ದೇರಳಕಟ್ಟೆ ಯೇನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದ ಅಧೀನದ ಯೇನೆಪೊಯ ವೈದ್ಯಕೀಯ ಕಾಲೇಜು, ಸಮುದಾಯ ಆರೋಗ್ಯ ವಿಭಾಗ ಹಾಗೂ ಹರೇಕಳ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಹರೇಕಳದಲ್ಲಿ ಗ್ರಾಮೀಣ ಆರೋಗ್ಯ ಮತ್ತು ತರಬೇತಿ ಕೇಂದ್ರದ ಸೇವೆಗೆ ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಹರೇಕಳದಲ್ಲಿ ನಿರ್ಮಿಸಲಾದ ಹರೇಕಳ ಆರೋಗ್ಯ ಆಸ್ಪತ್ರೆಯಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಆಸ್ಪತ್ರೆ ಕೇವಲ ಹರೇಕಳಕ್ಕೆ ಮಾತ್ರ ಸೀಮಿತವಾಗದೆ ಅಡ್ಯಾರ್, ಪಾವೂರು, ಬೋಳಿಯಾರದ ಸಜಿಪ ಹಾಗೂ ಇತರ ಗ್ರಾಮಸ್ಥರಿಗೂ ಪ್ರಯೋಜನ ವಾಗಲಿದೆ. ಗ್ರಾಮ ಪಂಚಾಯಿತಿ ಮುಖಾಂತರ ನಡೆಸಲ್ಪಡುವ ಆಸ್ಪತ್ರೆ ಇದಾಗಿದ್ದು ರಾಜ್ಯಕ್ಕೇ ಮಾದರಿ ಎಂದು ಹೇಳಿದರು.
ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಅಧ್ಯಕ್ಷತೆವಹಿಸಿ ಮಾತನಾಡಿದರು. ದ.ಕ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಕೆ., ಯೇನೆಪೊಯ ಪರಿಗಣಿತ ವಿಶ್ವವಿದ್ಯಾಲಯ ದ ಉಪಕುಲಪತಿ ಡಾ.ಎಂ.ವಿಜಯ್ ಕುಮಾರ್, ಪ್ರೊ.ಶ್ರೀಪತಿ ರಾವ್, ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರಹ್ಮಾನ್, ಪ್ರಾಚಾರ್ಯ ಡಾ.ಮೂಸಬ್ಬ, ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಮಲಾರ್, ಪಂಚಾಯಿತಿ ಉಪಾಧ್ಯಕ್ಷೆ ಕಲ್ಯಾಣಿ, ಅಭಿವೃದ್ಧಿ ಅಧಿಕಾರಿ ಮುತ್ತಪ್ಪ, ಪರೀಕ್ಷಾಂಗ ನಿಯಂತ್ರಕ ಡಾ.ಬಿ.ಟಿ.ನಂದೀಶ್, ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮುದಾಯ ಆರೋಗ್ಯ ವಿಭಾಗದ ಡಾ.ಅಕ್ಷಯ್ ಕೆ.ಎಂ. ಸ್ವಾಗತಿಸಿದರು. ಡಾ.ನವ್ಯ ವಂದಿಸಿದರು. ಭಾಗ್ಯರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.