ಭಾರೀ ಮಳೆ: ಕೊಲ್ಲಮೊಗ್ರ ಪೇಟೆ ಸಮೀಪ ರಸ್ತೆಗೆ ನುಗ್ಗಿದ ನೆರೆ ನೀರು
ಕೊಲ್ಲಮೊಗ್ರ- ಕಲ್ಮಕ್ಕಾರು ರಸ್ತೆ ಬಂದ್
ಸುಳ್ಯ: ಕೊಲ್ಲಮೊಗ್ರ, ಕಲ್ಮಕ್ಕಾರು ಭಾಗದಲ್ಲಿ ಸಂಜೆಯ ವೇಳೆಗೆ ಭಾರೀ ಮಳೆ ಸುರಿದಿದೆ. ಇದರಿಂದ ತೋಡು, ಹೊಳೆಗಳು ತುಂಬಿ ಹರಿದಿದ್ದು ಕೊಲ್ಲಮೊಗ್ರ ಪೇಟೆ ಸಮೀಪಕ್ಕೆ ನೆರೆ ನೀರು ನುಗ್ಗಿ ಬಂದಿದೆ. ಇದರಿಂದ ಕೊಲ್ಲಮೊಗ್ರ- ಕಲ್ಮಕ್ಕಾರು ಮುಖ್ಯ ರಸ್ತೆಯಲ್ಲಿ ಭಾರೀ ನೀರು ತುಂಬಿದ್ದು ಸಂಚಾರ ಬಂದ್ ಆಗಿದೆ.
ಶುಕ್ರವಾರ ಸಂಜೆಯ ವೇಳೆಗೆ ಭಾರೀ ಮಳೆ ಸುರಿದಿದ್ದು ತೋಡು, ಹೊಳೆಗಳಲ್ಲಿ ನೆರೆ ನೀರು ಕೊಚ್ಚಿ ಬಂದಿದೆ. ತೋಡು ತುಂಬಿ ಹರಿದಿದ್ದು ಇಲ್ಲಿರುವ ಸಣ್ಣ ಮೋರಿ ಬ್ಲಾಕ್ ಆಗಿ ನೀರು ಪೇಟೆಯತ್ತ ನುಗ್ಗಿ ಬಂದಿದೆ. ಪೇಟೆ ಸಮೀಪದ ಅಶ್ವತ್ಥ ಮರದ ಬಳಿಗೆ ನೀರು ಹರಿದು ಬಂದಿದೆ. ಮಳೆ ಮುಂದುವರಿದಿದ್ದು ಕೊಲ್ಲಮೊಗ್ರ ಪೇಟೆಗೆ ನೆರೆ ನೀರು ನುಗ್ಗುವ ಆತಂಕ ಎದುರಾಗಿದೆ. ಕೊಲ್ಲಮೊಗ್ರ- ಕಲ್ಮಕ್ಕಾರ್ ರಸ್ತೆಯ ಮೇಲೆ ನೀರು ತುಂಬಿದ್ದು ಒಂದು ಗಂಟೆಗೂ ಹೆಚ್ಚು ಸಮಯದಿಂದ ರಸ್ತೆಯಲ್ಲಿ ಸಂಚಾರ ಬಂದ್ ಆಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಲ್ಲಿ ನೀರು ನುಗ್ಗಿ ಬ್ಲಾಕ್ ಆಗುವುದು ಹಲವು ದಶಕಗಳಿಂದ ಇರುವ ಸಮಸ್ಯೆ. ಇಲ್ಲಿರುವ ಸಣ್ಣ ಮೋರಿಯ ಬದಲು ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಬೇಡಿಕೆ. ಮಳೆ ಬಂದು ತೋಡಿನಲ್ಲಿ ನೀರಿನ ಹರಿವು ಹೆಚ್ಚಾದರೆ ರಸ್ತೆಗೆ ನೀರು ಬಂದು ರಸ್ತೆ ಬ್ಲಾಕ್ ಆಗುತ್ತದೆ.