ಕರಾವಳಿಯ ಕೋಮುವಾದಿ ಶಕ್ತಿಗಳ ಎದುರಾಗಿ ದೃಢವಾಗಿ ನಿಲ್ಲಲು ಸರಕಾರಕ್ಕೆ ಇನ್ನೆಷ್ಟು ಕಾಲ ಬೇಕು?: ಮುನೀರ್ ಕಾಟಿಪಳ್ಳ
*ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಪುನೀತ್ ಅತ್ತಾವರ, ಶರಣ್ ಪಂಪ್ ವೆಲ್ ಬಂಧನಕ್ಕೆ ಆಗ್ರಹ

ಮಂಗಳೂರು: "ಮಸೀದಿಗಳ ಮುಂದೆ ಹನುಮಾನ್ ಚಾಲೀಸು ಪಠಣ ಮಾಡುವುದು ಖಂಡಿತಾ, ರಸ್ತೆ ಬದಿ ನಮಾಝ್ ಮಾಡಿದರೆ (ಮುಸ್ಲಿಮರನ್ನು ಮರ್ದಿಸಲು) ಇನ್ನು ಮುಂದೆ ನಮ್ಮ ಕೈಯಲ್ಲಿ ಧ್ವಜ ಅಲ್ಲ, ದಂಡ ಇರುತ್ತದೆ, ಎಚ್ಚರಿಕೆ..." ಎಂದು ಮಂಗಳೂರಿನ ಹೃದಯ ಭಾಗದಲ್ಲಿ ಜನರನ್ನು ಗುಂಪು ಸೇರಿಸಿ ಮುಸ್ಲಿಮ್ ಸಮುದಾಯಕ್ಕೆ ಬಹಿರಂಗ ಬೆದರಿಕೆ ಹಾಕಿರುವ ಬಜರಂಗ ದಳದ ಪುನೀತ್ ಅತ್ತಾವರ ಮೇಲೆ ಕೇಸು ದಾಖಲಿಸಲು, ಬಂಧಿಸಲು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ರಿಗೆ ಯಾರಾದರು ಮನವಿ ನೀಡಬೇಕೆ ? ಗೃಹ ಸಚಿವ ಡಾ.ಜಿ.ಪರಮೇಶ್ವರ ರಿಗೆ ಈ ಕುರಿತು ಇನ್ನೂ ಮಾಹಿತಿ ತಲುಪಿಲ್ಲವೆ ? ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
-ಮಸೀದಿ ಮುಂದೆ ಹನುಮಾನ್ ಚಾಲೀಸು ಪಠಣ ಮಾಡುತ್ತೇವೆ, ಮುಸ್ಲಿಮರ ವಿರುದ್ದ ದಂಡ ಎತ್ತಿಕೊಳ್ಳುತ್ತೇವೆ ಎಂಬುದು ಕೋಮು ಗಲಭೆ ಸೃಷ್ಟಿಗೆ ಕುಮ್ಮಕ್ಕು, ಸಂಚು ಅಲ್ಲವೆ, ಗಂಭೀರ ಕ್ರಿಮಿನಲ್ ಒಳಸಂಚು ಇದರ ಹಿಂದೆ ಅಡಗಿಲ್ಲವೆ ? ಇದನ್ನೆಲ್ಲ ಪೊಲೀಸ್ ಇಲಾಖೆಗೆ ಮನವರಿಕೆ ಮಾಡಿಕೊಡಲು ಪೊಲೀಸ್ ಕಮೀಷನರ್ ಕಚೇರಿಗೆ ನಿಯೋಗ ಕಟ್ಟಿಕೊಂಡು ಹೋಗಲೇಬೇಕೆ ? ಕರಾವಳಿಯ ಕೋಮುವಾದಿ ಶಕ್ತಿಗಳ ಎದುರಾಗಿ ಈ ಸರಕಾರ ದೃಢವಾಗಿ ನಿಲ್ಲಲು ಇನ್ನೆಷ್ಟು ಕಾಲ ಬೇಕು? ಮತಾಂಧ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡಬಲ್ಲ ಐಪಿಎಸ್ ಅಧಿಕಾರಿಗಳನ್ನು ಮಂಗಳೂರಿಗೆ ಕಳುಹಿಸಲು ಸರಕಾರಕ್ಕೆ ಯಾರು ಅಡ್ಡಿ ? ಎಂದು ಅವರು ಪ್ರಶ್ನಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಅವರೆ, ತಕ್ಷಣವೆ ಸೂಕ್ತ ಸೆಕ್ಷನ್ ಗಳಡಿ ಮೊಕದ್ದಮೆ ಹೂಡಿ ಕೋಮು ಗಲಭೆಗೆ ಬಹಿರಂಗ ಪ್ರಚೋದನೆ ನೀಡುತ್ತಿರುವ ಪುನೀತ್ ಅತ್ತಾವರ, ಶರಣ್ ಪಂಪ್ ವೆಲ್ ರನ್ನು ಬಂಧಿಸುವಂತೆ ಒತ್ತಾಯಿಸಿರುವ ಮುನೀರ್ ಕಾಟಿಪಳ್ಳ, ರಾಜ್ಯ ಕಾಂಗ್ರೆಸ್ ಸರಕಾರ ಪರಿಸ್ಥಿತಿ ಕೈ ಮೀರುವ ಮುನ್ನವೇ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ.