ರೇಸ್‌ನಲ್ಲಿ ಓಡಲು ನಾನು ಕುದುರೆಯಲ್ಲ: ಬಿ.ಕೆ. ಹರಿಪ್ರಸಾದ್
ಮಂಗಳೂರು: ನಾನು ಸಿಎಂ ಸ್ಥಾನದ ರೇಸ್‌ನಲ್ಲಿಲ್ಲ. ರೇಸ್‌ನಲ್ಲಿ ಓಡೋಕೆ ನಾನು ಕುದುರೆ ಅಲ್ಲ, ಕತ್ತೆನೂ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ರಾಜ್ಯದಲ್ಲಿ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಸಚಿವರು, ಶಾಸಕರ ಬಹಿರಂಗ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ನಾಯಕರು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಆದರೆ, ಅದೆಲ್ಲ ಎಐಸಿಸಿಯ ತೀರ್ಮಾನ. ಸಿದ್ದರಾಮಯ್ಯ ಅವರ ಪ್ರಕರಣ ಏನಾಗುತ್ತದೆ ಎಂಬುವುದನ್ನು ಕಾದು ನೋಡ ಬೇಕು. ಪ್ರಕರಣದ ಸಂಪೂರ್ಣ ತೀರ್ಪು ಬರುತ್ತದೋ ? ಇಲ್ಲವೋ ಎಂಬುವುದು ಗೊತ್ತಿಲ್ಲ. ಇದು ಕಾನೂನಿನ ಹೋರಾಟ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಾನೂನು ಹೋರಾಟದಲ್ಲಿ ಗೆಲುವು ಖಚಿತ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್‌ನ 135 ಜನ ಶಾಸಕರಿದ್ದಾರೆ. ಇಂಗ್ಲಿಷ್‌ನಲ್ಲಿ ‘ಒನ್ ಅಮಂಗ್ ಈಕ್ವಲ್’ ಅಂತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಅನಿಸಿಕೆಗಳು, ಆಸೆ, ಆಕಾಂಕ್ಷಿಗಳನ್ನ ಹೇಳಿಕೊಳ್ಳಲು ಅವಕಾಶವಿದ್ದು ಅದನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಕೋವಿಡ್ ಸಂದರ್ಭ ಡಾ. ಸುಧಾಕರ್ ಆರೋಗ್ಯ ಸಚಿವರಾಗಿದ್ದರು. ಕೋವಿಡ್ ಸಂದರ್ಭ ರಾಜ್ಯದಲ್ಲಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವ್ಯಾಕ್ಸಿನ್ ಅವ್ಯವಸ್ಥೆ ಯಾವ ರೀತಿ ಆಗಿತ್ತು ಅನ್ನೋದನ್ನು ಎಲ್ಲರೂ ನೋಡಿದ್ದಾರೆ. ಆದ್ದರಿಂದ ಅವರು ಅದರ ಬಗ್ಗೆ ಮಾತನಾಡದೆ ಇರುವುದು ಒಳ್ಳೆಯದು. ವರದಿ ಬಂದಿದೆ ಅದರ ಮೂಲಕ ಸತ್ಯ ಏನಿದೆ ಅದು ಹೊರ ಬರಲಿ. ತಪ್ಪು ನಡೆದಿದ್ದರೆ ಶಿಕ್ಷೆ ಅನುಭವಿಸಲು ತಯಾರಾಗಿರಿ ಎಂದು ಬಿಜೆಪಿ ಸರಕಾರದ ಸಂದರ್ಭ ನಡೆದಿದೆ ಎನ್ನಲಾದ ಕೊವೀಡ್ ಹಗರಣದ ಕುರಿತ ತನಿಖಾ ವರದಿ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿದರು.