ಸೆ. 2ರಂದು ಉಚ್ಚಿಲದಲ್ಲಿ ನವೀಕೃತ ಸಹಕಾರಿ ಮಹಲ್ ಉದ್ಘಾಟನೆ
ಬೆಳಪು ವ್ಯವಸಾಯ ಸಹಕಾರಿ ಸಂಘ ವಜ್ರಮಹೋತ್ಸವ
ಪಡುಬಿದ್ರಿ: ಬೆಳಪು ವ್ಯವಸಾಯ ಸಹಕಾರಿ ಸಂಘ ಪಣಿಯೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ ಬಡಾ ಗ್ರಾಮ ಉಚ್ಚಿಲದ ನವೀಕೃತ ಶಾಖೆ ಹಾಗೂ ಸಹಕಾರಿ ಮಹಲ್ ಉದ್ಘಾಟನಾ ಸಮಾರಂಭವು ಸೆ. 2ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಶನಿವಾರ ಪಣಿಯೂರು ಮುಖ್ಯ ಕಚೇರಿನಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
1948ರಲ್ಲಿ ಅತೀ ಸಣ್ಣ ಮಟ್ಟದಲ್ಲಿ ಪ್ರಾರಂಭಗೊಂಡ ಬೆಳಪು ವ್ಯವಸಾಯ ಸಹಕಾರಿ ಸಂಘವು ಪಣಿಯೂರಿನಲ್ಲಿ ಪ್ರಧಾನ ಕಚೇರಿ ಇದ್ದು, ಸ್ವತಂತ್ರವಾಗಿ ಕಾರ್ಯಾಚರಿಸುತ್ತಿದೆ. ಬಡಾ, ಬೆಳಪು ಮತ್ತು ಎಲ್ಲೂರಿನಲ್ಲಿ ಶಾಖೆಯನ್ನು ಹೊಂದಿದೆ. ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಎಂಬ ಧ್ಯೇಯೊದ್ದೇಶದೊಂದಿಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸುತಿದೆ. 50 ಕೋಟಿ ರೂ. ಠೇವಣಾತಿ ಸಂಗ್ರಹಿಸಲಾಗಿದ್ದು, ಮುಂದೆ 100 ಕೋಟಿ ರೂ. ಠೇವಣಾತಿಯ ಸಂಗ್ರಹದ ಯೋಜನೆ ಇದೆ ಎಂದು ವಿವರಿಸಿದರು.
ಸೆಪ್ಟಂಬರ್ 2ರಂದು ಬೆಳಗ್ಗೆ 10.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವಜ್ರಮಹೋತ್ಸವ ಸವಿ ನೆನಪಿನ ಕಟ್ಟಡ ಸಹಕಾರಿ ಮಹಲ್ ಉದ್ಘಾಟನೆ, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಕಾನ್ಫರೆನ್ಸ್ ಹಾಲ್, ಸಮೃದ್ಧಿ ಸಭಾಂಗಣ ಮತ್ತು ರೈತ ಬಂಧು, ಕೃಷಿ ಸಲಕರಣೆ ಕೇಂದ್ರ, ರೈತ ಮಾರುಕಟ್ಟೆ ಮತ್ತು ಗೋದಾಮು ಹಾಗೂ ಪಡಿತರ ವಿತರಣಾ ವಿಭಾಗ, ಸಹಕಾರಿ ಸಭಾಂಗಣ, ನವೋದಯ ಸಭಾಂಗಣ, ನವೀಕೃತ ಹಾವನಿಯಂತ್ರಿತ ಬ್ಯಾಂಕಿಂಗ್ ಶಾಖೆ, ಸೇಫ್ ಲಾಕರ್-ಭದ್ರತಾ ಕೊಠಡಿ ಉದ್ಗಾಟನೆ ಹಾಗೂ ವಜ್ರದರ್ಪಣ ಸ್ಮರಣ ಸಂಚಿಕೆ ಬಿಡುಗಡೆ, ಠೇವಣಾತಿದಾರರಿಗೆ ಡ್ರಾ ಮೂಲಕ ಚಿನ್ನದ ನಾಣ್ಯ ಬಹುಮಾನ, ಸನ್ಮಾನ, ಸದಸ್ಯರಿಗೆ ಡ್ರಾ ಮೂಲಕ ಚಿನ್ನದ ನಾಣ್ಯ ಕೊಡುಗೆ, ನೂತನ ಸ್ವಸಹಾಯ ಸಂಘಕ್ಕೆ ಚಾಲನೆ ನೀಡಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ವಿವರಿಸಿದರು.
ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಡಿಜಿಎಂ ಬ್ಯಾಂಕ್‍ನ ನಿತ್ಯಾನಂದ ಶೇರಿಗಾರ್, ಪ್ರತಿನಿಧಿ ಬಾಲಕೃಷ್ಣ ಭಟ್, ನಿರ್ದೇಶಕರಾದ ಶೋಭಾ ಭಟ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ, ಉಚ್ಚಿಲ ಶಾಖೆಯ ಶಾಖಾ ಪ್ರಬಂಧಕ ನವೀನ್ ಕುಮಾರ್, ಪಾಂಡು ಎಂ. ಶೇರಿಗಾರ್, ಆಲಿಯಬ್ಬ, ಸೈಮನ್ ಡಿಸೋಜ, ಪಾಂಡು ಶೆಟ್ಟಿ, ವಿಮಲಾ ಅಂಚನ್, ಅನಿತಾ ಆನಂದ, ಮೀನಾ ಪೂಜಾರ್ತಿ, ಸತೀಶ್ ಶೆಟ್ಟಿ ಗುಡ್ಡಚ್ಚಿ ಉಪಸ್ಥಿತರಿದ್ದರು.