ಅಂತರ್ಯುದ್ಧದತ್ತ ಭಾರತದ ಹೆಜ್ಜೆ: ತುಷಾರ್ ಗಾಂಧಿ ಮುನ್ಸೂಚನೆ
ಮಂಗಳೂರು: ದೇಶದಲ್ಲಿ ಆಡಳಿತ ನಡೆಸುವವರ ಜತೆ ನ್ಯಾಯಾಂಗ ಹಾಗೂ ಶಾಸಕಾಂಗಗಳು ರಾಜೀ ಮಾಡಿಕೊಂಡಿವೆ. ಮಾಧ್ಯಮ ಮಾರಾಟವಾಗಿವೆ. ದೇಶದಲ್ಲಿ ಉಂಟಾಗುತ್ತಿರುವ ಇಂತಹ ಬಿಕ್ಕಟ್ಟು ಹಾಗೂ ಅತಂತ್ರತೆಯ ಪರಿಸ್ಥಿತಿಯು ಅತೀ ಶೀಘ್ರದಲ್ಲೇ ಅಂತರ್ಯುದ್ಧಕ್ಕೆ ಕಾರಣವಾಗಲಿದೆ ಎಂದು ಮಹಾತ್ಮ ಗಾಂಧೀಜಿಯವರ ಮರಿಮಗ ಮತ್ತು ಸಾಮಾಜಿಕ ಚಿಂತಕ ತುಷಾರ್ ಗಾಂಧಿ ಮುನ್ಸೂಚನೆ ನೀಡಿದ್ದಾರೆ.
ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಟಾಗೋರ್ ಪಾರ್ಕ್ನಲ್ಲಿ ಶುಕ್ರವಾರ ಸಮಕಾಲೀನ ಭಾರತದಲ್ಲಿ ಗಾಂಧಿ ಚಿಂತನೆಗಳ ಬಗ್ಗೆ ಚರ್ಚೆ, ಸಂವಾದ ಕಾರ್ಯಕ್ರಮದ ವೇಳೆ, ಸಭಿಕರೊಬ್ಬರ ಪ್ರಶ್ನೆಯೊಂದಕ್ಕೆ ತುಷಾರ್ ಗಾಂಧಿ ಈ ಪ್ರತಿಕ್ರಿಯೆ ನೀಡಿದರು.
ದೇಶದಲ್ಲಿ ನಡೆಯುತ್ತಿರು ಈ ಬಿಕ್ಕಟ್ಟಿನ ಪರಿಸ್ಥಿತಿಗಳು ಹೀಗೆಯೇ ಮುಂದುವರಿದರೆ ಮುಂದಿನ 10 ವರ್ಷಗಳಲ್ಲ. ಬದಲಾಗಿ ಐದು ವರ್ಷಗಳೊಳಗೆ ಅಂತರ್ಯುದ್ಧ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ ಎಂದವರು ಹೇಳಿದರು.
ಅಂತರ್ಯುದ್ಧದ ಪ್ರಥಮ ಹೆಜ್ಜೆಯಾಗಿ ಜನರೊಳಗೆ ದ್ವೇಷ ಸ್ವಾಭಾವಿಕವಾಗಿದೆ. ಇದು ಚುನಾವಣಾ ಪ್ರಕ್ರಿಯೆಗಳಲ್ಲಿ ಅಸ್ತ್ರ ವಾಗಿ ಬಳಕೆಯಾಗುತ್ತಿದೆ. ಜವಾಬ್ಧಾರಿಯುತ ಸ್ಥಾನದಲ್ಲಿರುವ ನಾಯಕರ ಚುನಾವಣಾ ಪ್ರಚಾರಗಳನ್ನು ಗಮನಿಸಿದರೆ, ಅದು ಸಂಪೂರ್ಣ ದ್ವೇಷ ಮತ್ತು ಸಮಾಜದ ವಿಭಜನೆಯ ಹೇಳಿಕೆಗಳಿಂದ ಕೂಡಿದೆ. ಇಂತಹ ವಿಭಜನಕಾರಿ ಹೇಳಿಕೆಗಳು ಅರಾಜಕತೆ ಮತ್ತು ಅತಂತ್ರತೆಯ ವಾತಾವರಣ ಸೃಷ್ಟಿಸಲು ಅವಕಾಶ ನೀಡಲಿದೆ. ಇದು ಅಂತರ್ಯುದ್ಧಕ್ಕೆ ಕಾರಣ ವಾಗ ಲಿದೆ. ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಇದನ್ನು ಗಮನಿಸಿದ್ದೇವೆ. ಇಂತಹ ಬೆಳವಣಿಗೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಆಗದಿದ್ದಲ್ಲಿ ಮುಂದಿನ ಐದು ವರ್ಷಗಳಲ್ಲಿಯೇ ಅಂತರ್ಯುದ್ಧದ ಪರಿಸ್ಥಿತಿ ಸೃಷ್ಟಿಯಾದರೂ ಅಚ್ಚರಿ ಪಡಬೇಕಾಗಿಲ್ಲ ಎಂದವರು ಹೇಳಿದರು.
‘ಶಾಂತಿ ಸೇನೆ’ಗಳ ತುರ್ತು ಅಗತ್ಯ
‘ಯಾವುದೇ ರೀತಿ ಸಂಘರ್ಷಗಳಿಗೆ ಮಾತುಕತೆಯ ಮೂಲಕ ಪರಿಹಾರ ಸಾಧ್ಯವಿದೆ. ಆದರೆ ರಾಜಕೀಯ ವ್ಯವಸ್ಥೆಗಳು ಅದಕ್ಕೆ ಅವಕಾಶ ನೀಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಾಗೃತ ಸಮಾಜ ಎಚ್ಚೆತ್ತುಕೊಳ್ಳುವ ಅಗತ್ಯವಿದ್ದು, ಬಾಪೂ ಹಾಗೂ ವಿನೋಬಾವೆಯವರು ರೂಪಿಸಿದ ಚಳವಳಿಯಂತೆ ಕ್ರಿಯಾಶೀಲ ‘ಶಾಂತಿ ಸೇನಾನಿ’ಗಳು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ದೇಶದಲ್ಲಿ ಬಿಕ್ಕಟ್ಟು ಸೃಷ್ಟಿಸುವವರು ಸ್ವಾತಂತ್ರ್ಯ ಪೂರ್ವದಲ್ಲಿಯೂ ಇದ್ದರು. 1946ರಿಂದ 1948 ಇತಿಹಾಸವನ್ನು ಅರಿ ತಾಗ ಅಂದಿನ ಸಮಾಜ ಹಾಗೂ ಇಂದಿನ ಸಮಾಜದ ಸಾಮ್ಯತೆಯನ್ನು ಪರಿಗಣಿಸಬಹುದು. ಆದರೆ ಇಂದು ದೇಶಪ್ರೇಮಿ ಗಳ ಸೋಗಿನಲ್ಲಿ ದೇಶಕ್ಕೆ ಹಾನಿ ಮಾಡಿ ರಕ್ಷಣೆಯ ಘೋಷಣೆ ಕೂಗು ಹಾಕುತ್ತಿದ್ದಾರೆ. 1992 ದೇಶದಲ್ಲಿ ರಥಯಾತ್ರೆ ಆರಂಭ ಗೊಂಡು ಮಂದಿರ ನಿರ್ಮಾಣದ ಹೋರಾಟ ಆರಂಭವಾದಾಗಲೂ ಜಾತ್ಯತೀತ ರಾಷ್ಟ್ರ ಕಲ್ಪನೆಗೆ ಬದಲಾಗದು ಎಂದು ಹೇಳುತ್ತಲೇ ಪ್ರಜ್ಞಾವಂತರು ಸಮಾಧಾನ ಪಟ್ಟುಕೊಂಡು ಬಂದೆವು. ಆದರೆ ಯಾವಾಗ ಏನು ಬದಲಾಯಿತು ಎಂದು ತಿಳಿಯದಾದೆವು. ಆದರೆ ಸಮಾಜದಲ್ಲಿ ಪ್ರಸಕ್ತ ಸಂದರ್ಭದಲ್ಲಿ ಜಾತ್ಯತೀತ ಮನಸ್ಸುಗಳು ಹಿಂದೆಂದಿಗಿಂತಲೂ ಕ್ರಿಯಾಶೀಲವಾಗಬೇಕಾಗಿದೆ. ನಮ್ಮ ಕಾಲದಲ್ಲಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ತಪ್ಪುಗಳ ವಿರುದ್ಧ ಧ್ವನಿ ಎತ್ತುವ, ಪ್ರಶ್ನಿಸುವ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಿಎಎ ವಿರುದ್ಧದ ಮತ್ತು ರೈತ ಹೋರಾಟ ನಮಗೆ ಪ್ರೇರಣಾದಾಯಿ ಎಂದು ಅವರು ಹೇಳಿದರು.
‘ಗಾಂಧೀಜಿಯನ್ನು ಮಹಾತ್ಮ ಎಂಬ ಚೌಕಟ್ಟಿನಿಂದ ಹೊರತಂದು ಅವರೂ ಸಾಮಾನ್ಯ ಮನುಷ್ಯ ಎಂಬುದನ್ನು ತಿಳಿಸುವ ಪ್ರಯತ್ನ ನಡೆಸುತ್ತಿದ್ದೇನೆ. ಅವರನ್ನು ವಿಜೃಂಭಿಸಲು ನಾನು ಬಯಸುವುದಿಲ್ಲ. ಅವರಿಗೆ ಮಹಾತ್ಮ ಅಥವಾ ದೇವರ ಸ್ಥಾನ ನೀಡಿದರೆ ಅವರ ಆದರ್ಶಗಳನ್ನು ಪಾಲಿಸಲು ಸಾಧ್ಯವಾಗದು ಎಂದವರು ಅಭಿಪ್ರಾಯಿಸಿದರು.
ಮಾಜಿ ಶಾಸಕ ಜೆ.ಆರ್.ಲೋಬೊ, ಪ್ರೊ. ರಾಜಾರಾಂ ತೋಳ್ಪಾಡಿ, ಪ್ರಭಾಕರ ಶ್ರೀಯಾನ್, ಎನ್.ಜಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ಗಾಂಧಿ ಪ್ರತಿಷ್ಠಾನದ ಡಾ. ಇಸ್ಮಾಯಿಲ್ ಸ್ವಾಗತಿಸಿದರು. ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪ್ರಾಸ್ತಾವಿಕವಾಗಿ ಮಾತನಾಡಿ ದರು. ನಾಗೇಶ್ ಕಲ್ಲೂರು ವಂದಿಸಿದರು.
ಸರ್ದಾರ್ ವಲ್ಲಭಬಾಯಿಯನ್ನು ಗಾಂಧಿ ನಿರ್ಲಕ್ಷಿದ್ದಾರೆಂಬುದು ಅಪಪ್ರಚಾರ
ಗಾಂಧೀಜಿಯವರು ಸರ್ದಾರ್ ವಲ್ಲಭಬಾಯಿ ಪಟೇಲ್ಗೆ ಸಿಗಬೇಕಾಗಿದ್ದ ಪ್ರಥಮ ಪ್ರಧಾನಿಯ ಸ್ಥಾನವನ್ನು ನೆಹರೂ ಅವ ರಿಗೆ ನೀಡುವ ಮೂಲಕ ತಪ್ಪಿಸಿದ್ದರು ಎನ್ನುವುದು ಅಪಪ್ರಚಾರವಷ್ಟೆ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಸಂದರ್ಭ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲರ ಹೆಸರನ್ನು ಪಕ್ಷದ ಬಹುತೇಕರು ಸೂಚಿಸಿದ್ದರು. ಆದರೆ 1994ರಿಂದಲೇ ಸರ್ದಾರ್ ವಲ್ಲಭಬಾಯಿವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದ ಗಾಂಧೀಜಿ ಅವರಿಗೆ ತಮ್ಮ ಆಶ್ರಮದಲ್ಲಿ ಪ್ರಾಕೃತಿಕ ಚಿಕಿತ್ಸೆಯ ಬಗ್ಗೆಯೂ ಸಲಹೆ ನೀಡಿದ್ದರು. ಆದರೆ ಆ ಸಂದರ್ಭದಲ್ಲಿ ಕಾಂಗ್ರೆಸ್ಗೆ ಓರ್ವ ಯುವ ದೂರದೃಷ್ಟಿ ನಾಯಕನ ಅಗತ್ಯವಿತ್ತು. ಆ ಆಯ್ಕೆ ನೆಹರೂ ಆಗಿತ್ತು. ಬ್ರಿಟಿಷರು ಆಡಳಿತ ಹಸ್ತಾಂತರ ಮಾಡುವ ವೇಳೆ ಸರಕಾರದ ಬೇಡಿಕೆ ಇಟ್ಟಾಗ ಪಕ್ಷದ ಅಧ್ಯಕ್ಷನಿಗೇ ಮನ್ನಣೆ ನೀಡಲಾಯಿತು. ಇದು ವಾಸ್ತವ. ಆದರೆ ಇತಿಹಾಸವನ್ನು ತಿರುಚಿ ಸುಳ್ಳು ಹರಡುವುದು ಸಾಮಾನ್ಯವಾಗಿರುವ ಕಾರಣ ಇಂತಹ ಅಪಪ್ರಚಾರಗಳು ಮುನ್ನಲೆಗೆ ಬಂದಿವೆ ಎಂದು ಪ್ರೊ. ಉದಯ ಇರ್ವತ್ತೂರುರವರ ಪ್ರಶ್ನೆಯೊಂದಕ್ಕೆ ತುಷಾರ್ ಗಾಂಧಿ ಪ್ರತಿಕ್ರಿಯಿಸಿದರು.