ಭಾರತ ಅಮೃತ ಕಾಲದೆಡೆಗೆ ದಾಪುಗಾಲು: ನಳಿನ್ ಕುಮಾರ್ ಕಟೀಲ್
‘ನನ್ನ ಮಣ್ಣ ನನ್ನ ದೇಶ’ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು, ಸೆ.10: ಹುತಾತ್ಮರಾದ ದೇಶದ ಸ್ವಾತಂತ್ರ್ಯ ಸೇನಾ ಯೋಧರು, ಪೊಲೀಸ್ ಅಧಿಕಾರಿಗಳ ಸ್ಮರಣಾರ್ಥ ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಿರ್ಮಿಸಲಾಗುವ ‘ಅಮೃತ ವನ’ ನಿರ್ಮಾಣದ ಪ್ರಯುಕ್ತ ದ.ಕ. ಜಿಲ್ಲೆಯ ಧಾರ್ಮಿಕ ಕ್ಷೇತ್ರ, ಹಳ್ಳಿಗಳಿಂದ ಪವಿತ್ರ ಮಣ್ಣನ್ನು ಸಂಗ್ರಹಿಸುವ ‘ನನ್ನ ಮಣ್ಣ ನನ್ನ ದೇಶ’ ಅಭಿಯಾನಕ್ಕೆ ರವಿವಾರ ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಹೊರಾಂಗಣದಲ್ಲಿ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತವು ಅಭಿವೃದ್ಧಿಯಲ್ಲಿ ಅಮೃತ ಕಾಲದೆಡೆಗೆ ದಾಪುಗಾಲು ಇಡಲಿದೆ. ವಲ್ಲಭಬಾಯಿ ಪಟೇಲ್‌ರ ಪ್ರತಿಮೆ ನಿರ್ಮಾಣಕ್ಕಾಗಿ ದೇಶಾದ್ಯಂತ ಉಕ್ಕು ಸಂಗ್ರಹ ಮಾಡುವ ಮೂಲಕ ವಿನೂತನ ಕ್ರಾಂತಿ ನಡೆಸಲಾಗಿತ್ತು. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ವಿವಿಧ ಯಾತ್ರೆಯ ಮೂಲಕ ಹೊಸ ಸಂಚಲನ ಸೃಷ್ಟಿಯಾಗಿತ್ತು. ಅದೇ ಸ್ವರೂಪದಲ್ಲಿ ಮೂರನೇ ದೊಡ್ಡ ಜಾಗೃತಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ದೇಶದ 7 ಸಾವಿರಕ್ಕೂ ಅಧಿಕ ಸ್ಥಳದಿಂದ ಮಣ್ಣು ಸಂಗ್ರಹಿಸಿ ಹೊಸದಿಲ್ಲಿಯಲ್ಲಿ ಅಮೃತವನ ಸಾಕಾರವಾಗಲಿದೆ. ಇಂಡಿಯಾ ಬದಲಿಗೆ ಭಾರತ ಎಂಬ ಪರಿಕಲ್ಪನೆ ರೋಮಾಂಚನಕಾರಿ ಸಂಗತಿಯಾಗಿದೆ. ಜೋಡೋ ಭಾರತ್ ಮಾಡಿದವರಿಗೆ ಈಗ ಭಾರತ ಅಂದಾಗ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಬಿಜೆಪಿ ನಾಯಕ ಸಂತೋಷ್ ಕುಮಾರ್ ರೈ ಬೋಳಿಯಾರು ಸ್ವಾಗತಿಸಿದರು. ಸಂದೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.