ಗುಣಮಟ್ಟದ ಉತ್ಪನ್ನಗಳಿಂದ ಉದ್ಯಮ ಬೆಳೆಯಲು ಸಾಧ್ಯ: ಎನ್.ವಿನಯ್ ಹೆಗ್ಡೆ
ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ, ಕೈಗಾರಿಕಾ ಪ್ರದರ್ಶನ - ಎಂಎಸ್‌ಎಂಇ ಎಕ್ಸ್‌ಪೋಗೆ ಚಾಲನೆ
ಮಂಗಳೂರು, ಅ.11: ಉತ್ತಮ ಗುಣಮಟ್ಟದ ಉತ್ಪನ್ನಗಳ ಉತ್ಪಾದನೆ , ನೌಕರರ ದಕ್ಷತೆಯಿಂದ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್.ವಿನಯ್ ಹೆಗ್ಡೆ ತಿಳಿಸಿದ್ದಾರೆ.
ಭಾರತ ಸರಕಾರದ ಸೂಕ್ಷ್ಮ, ಸಣ್ಣ ಮಧ್ಯಮ ಉದ್ಯಮ (ಎಂಎಸ್‌ಎಂಇ) ಅಭಿವೃದ್ಧಿ ಮತ್ತು ಸೌಲಭ್ಯ ಕಾರ್ಯಾಲಯ ಮಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ , ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದ ಮಿನಿ ಹಾಲ್‌ನಲ್ಲಿ ಬುಧವಾರ ಆರಂಭಗೊಂಡ ಎರಡು ದಿನಗಳ ‘ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೈಗಾರಿಕಾ ಪ್ರದರ್ಶನ ’ ಎಂಎಸ್‌ಎಂಇ ಎಕ್ಸ್‌ಪೋ -2023’ ಉದ್ಘಾಟಿಸಿ ಮಾತನಾಡಿದರು.
ದೊಡ್ಡ ಉದ್ಯಮಗಳ ಬೆಳವಣಿಗೆಗೆ ಸಣ್ಣ ಉದ್ಯಮಗಳ ನೆರವು ಅಗತ್ಯ. ನಾವು ಉತ್ಪಾದಿಸುವ ಉತ್ಪನ್ನಗಳು ಉತ್ತಮ ಗುಣಮಟ್ಟದಿಂದ ಕೂಡಿದರೆ ಬಳಕೆದಾರರು ನಮ್ಮ ಕೈ ಹಿಡಿಯುತ್ತಾರೆ. ಈ ಕಾರಣದಿಂದಾಗಿ ಉತ್ಪನ್ನಗಳ ಗುಣಮಟ್ಟ ದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟರು.
ಬಂಡವಾಳ ಹೂಡಿಕೆಯ ಸಾಮರ್ಥ್ಯ, ತಂತ್ರಜ್ಞಾನ, ಎಲ್ಲವೂ ಸರಿಯಾಗಿದ್ದರೆ ಉದ್ಯಮ ಬೆಳವಣಿಗೆಯಾಗುತ್ತದೆ ಎಂದರು.
ಎಸ್‌ಬಿಐ ಮಂಗಳೂರಿನ ಡಿಜಿಎಂ ಜೋಬಿ ಜೋಸ್, ಬೆಂಗಳೂರು ಎನ್‌ಎಸ್‌ಐಸಿ ಡೆಪ್ಯುಟಿ ಜನರಲ್ ಮ್ಯಾನೇಜರ್ ವಿ.ಸುರೇಶ್ ಬಾಬು, ಕೆನರಾ ಬ್ಯಾಂಕ್ ಡಿಜಿಎಂ ಶ್ರೀಕಾಂತ್ ವಿ.ಕೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್‌ನ ಅಧ್ಯಕ್ಷ ಅನಂತೇಶ್ ವಿ ಪ್ರಭು, ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾಧ್ಯಕ್ಷ ವಿಶಾಲ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಮಂಗಳೂರು ಇದರ ಜಂಟಿ ನಿರ್ದೇಶಕ ದೇವರಾಜ್ ಕೆ.ಸಮಾರಂಭದ ಅಧ್ಯಕ್ಷೆ ವಹಿಸಿದ್ದರು.
ಮಂಗಳೂರು ಎಂಎಸ್‌ಎಂಇ ಡಿಎಫ್‌ಒ ಮಂಗಳೂರು ಶಾಖೆಯ ಸಹಾಯಕ ನಿರ್ದೇಶಕ ಸುರೇಂದ್ರ ಶೇರಿಗಾರ್ ಸ್ವಾಗತಿಸಿದರು, ಸಹಾಯಕ ನಿರ್ದೆಶಕಿ ಶ್ರುತಿ ಜಿ.ಕೆ ವಂದಿಸಿದರು.
ಎಂಎಸ್‌ಎಂಇ ವಲಯದ ಯೋಜನೆಗಳು ಮತ್ತು ಪ್ರಯೋಜನಗಳು, ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ ಪಾಲಿಸಿ , ಜಿಇಎಂ ಮತ್ತು ಇತರ ವಿವಿಧ ಸರಕಾರಿ ಯೋಜನೆಗಳು ಕ್ರೆಡಿಟ್ ಸೌಲಭ್ಯಗಳು ಬಗ್ಗೆ ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.