ಭಾಷಣ ಮಾಡುವುದಕ್ಕಿಂತ ಜನರೊಂದಿಗೆ ಬೆರೆತು ಪಕ್ಷಕ್ಕಾಗಿ ಕೆಲಸ ಮಾಡಿ: ಸಂಸದ ಸಸಿಕಾಂತ್ ಸೆಂಥಿಲ್
ಸಂವಾದ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಸಲಹೆ
ಮಂಗಳೂರು: ದೇಶವಿಂದು ಸಂದಿಗ್ಧ ಸ್ಥಿತಿಯಲ್ಲಿದೆ. ಜನರ ಮೇಲೆ ಜನರಿಂದಲೇ ಎತ್ತಿಕಟ್ಟುವ ನೀಚ ರಾಜಕಾರಣ ನಡೆಯು ತ್ತಿವೆ. ಈ ರಾಜಕಾರಣದ ವಿರುದ್ಧ ಸೈದ್ಧಾಂತಿಕ ಹೋರಾಟ ಮಾಡುವ ಅಗತ್ಯವಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ತಳಮಟ್ಟದಿಂದ ಕೆಲಸ ಮಾಡಬೇಕು. ಕಾಂಗ್ರೆಸ್‌ನಲ್ಲಿ ಭಾಷಣ ಮುಖ್ಯವಲ್ಲ. ಜನರ ಜೊತೆ ಬೆರೆತು ಅವರ ಕಷ್ಟ ಅರಿತು ಕೊಳ್ಳುವ ಪ್ರಯತ್ನ ಮಾಡುತ್ತಲೇ ಪಕ್ಷದ ಬೆಳವಣಿಗಾಗಿ ಕೆಲಸ ಮಾಡಬೇಕು ಎಂದು ಸಂಸದ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಸಲಹೆ ನೀಡಿದರು.
ದ.ಕ.ಜಿಲ್ಲಾ ಕಾಂಗ್ರೆಸ್, ಮಂಗಳೂರು ನಗರ ಬ್ಲಾಕ್, ಮಂಗಳೂರು ದಕ್ಷಿಣ ಬ್ಲಾಕ್ ಸಮಿತಿಯ ವತಿಯಿಂದ ನಗರದ ಬೆಂದೂರ್‌ನ ಖಾಸಗಿ ಹಾಲ್‌ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಪ್ರಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ಕೇವಲ ಭಾಷಣಕ್ಕೆ ಸೀಮಿತರಾಗಿರಲಿಲ್ಲ. ದೇಶಕ್ಕಾಗಿ 11 ವರ್ಷ ಜೈಲಿನಲ್ಲಿ ಕಾಲ ಕಳೆದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ತ್ಯಾಗ ಕೂಡ ಎಲ್ಲರಿಗೂ ತಿಳಿದ ವಿಚಾರವಾಗಿದೆ. ಯುವ ನಾಯಕ ರಾಹುಲ್ ಗಾಂಧಿಯೂ ಭಾಷಣಕ್ಕೆ ಸೀಮಿತರಾಗಿಲ್ಲ. ಭಾರತ್ ಜೋಡೋ ಮೂಲಕ ದೇಶಾದ್ಯಂತ 4 ಸಾವಿರ ಕಿ.ಮೀ ನಡೆದು ಜನತೆಯ ಗಮನವನ್ನು ಸೆಳೆದರು. ದೇಶಕ್ಕಾಗಿ ಅವರು ಇಷ್ಟೆಲ್ಲಾ ತ್ಯಾಗ ಮಾಡುವಾಗ ಕಾಂಗ್ರೆಸ್ ಕಾರ್ಯಕರ್ತರಾದ ನಾವು ಸುಮ್ಮನೆ ಕೂರಬಾರದು. ಅವರೊಂದಿಗೆ ನಾವು ಕೂಡ ಹೆಜ್ಜೆ ಹಾಕಬೇಕು. ದೇಶ ಕಟ್ಟಲು ನಮ್ಮ ಕೈಲಾದಷ್ಟು ಸೇವೆ ಸಲ್ಲಿಸಬೇಕು ಎಂದು ಸಸಿಕಾಂತ್ ಸೆಂಥಿಲ್ ಕರೆ ನೀಡಿದರು.
ಒಂದು ಮನೆಯಲ್ಲಿ ಅಭಿಪ್ರಾಯ ಭೇದಗಳಿರುವುದು ಸಹಜ. ಕಾಂಗ್ರೆಸ್ ಪಕ್ಷವೂ ಒಂದು ಕುಟುಂಬವಿದ್ದಂತೆ. ಮನೆಯಲ್ಲಿ ದ್ದಂತೆ ಪಕ್ಷದಲ್ಲೂ ಅಭಿಪ್ರಾಯ ಭೇದವಿರಬಹುದು. ಅದನ್ನೆಲ್ಲಾ ಮರೆತು ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರೂ ಶ್ರಮಿಸಬೇಕಿದೆ. ಅದರಲ್ಲೂ ಮಂಗಳೂರಿನ ಪಕ್ಷದ ಕಾರ್ಯಕರ್ತರ ಮೇಲೆ ಹೆಚ್ಚು ಜವಾಬ್ದಾರಿ ಇದೆ ಎಂಬುದನ್ನು ತಾನು ಮತ್ತೊಮ್ಮೆ ನೆನಪಿಸಬಯಸುತ್ತೇನೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.
ನನ್ನ ಕಥೆ-ನಿಮ್ಮ ಕಥೆ-ನಮ್ಮ ಕಥೆ
ಪಕ್ಷದ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿದ ಬಳಿಕ ಱನನ್ನ ಕಥೆ-ನಿಮ್ಮ ಕಥೆ-ನಮ್ಮ ಕಥೆ ಮೂಲಕ ಮಾತು ಆರಂಭಿ ಸಿದ ಸಸಿಕಾಂತ್ ಸೆಂಥಿಲ್ 2019ರಲ್ಲಿ ತಾನು ದ.ಕ.ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟಾಗ ಮುಂದೇನು ಎಂಬ ಸ್ಪಷ್ಟ ಕಲ್ಪನೆಯೂ ನನಗೆ ಇರಲಿಲ್ಲ. ಕಾಂಗ್ರೆಸ್ ಪಕ್ಷದಿಂದ ಸಂಸದನಾಗಿ ಆಯ್ಕೆಯಾಗುವೆ, ಕಾಂಗ್ರೆಸ್‌ನ ವೇದಿಕೆಗಳ ಮೇಲೆ ನಿಂತು ಮಾತನಾಡುವೆ ಎಂದೂ ಕೂಡ ಊಹಿಸಿದವನಲ್ಲ. ಆದರೆ ದೇಶ ಕಟ್ಟಲು ಶ್ರಮಿಸಿದ ಹಿರಿಯರ ತ್ಯಾಗದ ಫಲವಾಗಿ ನಾನಿಂದು ನಿಮ್ಮೊಂದಿಗೆ ಇದ್ದೇನೆ.
ನಾನು ದಲಿತ ಕುಟುಂಬದಲ್ಲಿ ತೀರಾ ಹಳ್ಳಿಯಲ್ಲಿ ಹುಟ್ಟಿ ಬೆಳೆದವ. ನನ್ನ ತಂದೆ ಹೇಗೋ ಕಲಿತು ವಕೀಲರಾದರು. ನನ್ನಂತೆ ನನ್ನ ಮಕ್ಕಳು ಆಗಬಾರದು ಅಂತ ನನ್ನನ್ನು ಓದಿಸಿದರು. ತಂದೆ-ತಾಯಿಗೆ ನಾವು ಇಬ್ಬರು ಗಂಡು ಮಕ್ಕಳು. ಅದರಲ್ಲಿ ಒಬ್ಬ ದೇಶಕ್ಕೆ ಮಗ. ಇನ್ನೊಬ್ಬ ಮನೆಗೆ ಮಗ ಅಂತ ಹೇಳುತ್ತಲೇ ಇದ್ದರು. ನಾನು ದೇಶದ ಮಗನಾಗಿ ಬೆಳೆದೆ. ಮನೆಯಲ್ಲಿ ರುವ ಬದಲು ಜನರ ಜೊತೆ ಬೆರೆತೆ. ಖಾಸಗಿ ಬದುಕಿಗಿಂತ ಸಾರ್ವಜನಿಕ ಬದುಕಿನಲ್ಲಿ ಭಾವನಾತ್ಮಕ ಸಂಬಂಧವಿದೆ ಎಂದು ತಿಳಿದುಕೊಂಡೆ.
ಇಂಜಿನಿಯರಿಂಗ್ ಪದವಿಯ ಬಳಿಕ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದೆ. ಬಳಿಕ ಉಪನ್ಯಾಸಕನಾದೆ. ಎನ್‌ಜಿಒ ಸಂಘಟನೆಯಲ್ಲಿ ಕೆಲಸ ಮಾಡಿದೆ. ಆವಾಗಲೆ ಜಾತಿ ವ್ಯವಸ್ಥೆಯ ಆಳ-ಅಗಲ ಅರಿತುಕೊಂಡೆ. ಬಳಿಕ ಐಎಎಸ್ ಪರೀಕ್ಷೆ ಬರೆದೆ. ಸತತ ನಾಲ್ಕನೆಯ ಪ್ರಯತ್ನದಲ್ಲಿ ಪಾಸ್ ಆದೆ. ತಂದೆಯ ಅಭಿಲಾಶೆಯಂತೆ ಸಾರ್ವಜನಿಕ ಜೀವನದಲ್ಲಿ ಕರ್ತವ್ಯ ಸಲ್ಲಿಸಲು ಅವಕಾಶ ಸಿಕ್ಕಿತು. 10 ವರ್ಷ ಸರಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಜನರ ಭಾವನೆಗಳನ್ನು ಮತ್ತಷ್ಟು ಹತ್ತಿರದಿಂದ ಕಂಡೆ.
ಈ ಮಧ್ಯೆ ನನ್ನ ಕಾಲೇಜಿನ ಗೆಳತಿಯನ್ನೇ ಮದುವೆಯಾದೆ. ಆ ಸಂದರ್ಭ ನಾವು ಪರಸ್ಪರ ಒಂದು ಕಂಡೀಷನ್ ಹಾಕಿದೆವು. ಮಕ್ಕಳು ಬೇಡ, ಸಂಪತ್ತನ್ನು ಕೂಡ ಕ್ರೋಢೀಕರಿಸುವುದು ಬೇಡಾಂತ ತೀರ್ಮಾನಕ್ಕೆ ಬಂದೆವು.
2002ರ ಗೋಧ್ರಾ ಘಟನೆಗೆ ಸಂಬಂಧಿಸಿದ ವ್ಯಕ್ತಿಯೇ 2014ರಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿದಾಗ ನನಗೆ ಭಯ ಕಾಡತೊಡಗಿತು. ದೇಶ ಎತ್ತ ಸಾಗುತ್ತಿದೆ ಎಂದು ಆತಂಕವಾಗತೊಡಗಿತು. ಜನರನ್ನು ಜನರ ಮೇಲೆಯೇ ಎತ್ತಿ ಕಟ್ಟುವ ರಾಜಕಾರಣವನ್ನು ತೀರಾ ಹತ್ತಿರದಿಂದ ಕಂಡೆ. ಕಾಶ್ಮೀರದ ಜನರನ್ನು ಗೃಹಬಂಧನದಲ್ಲಿರಿಸಿದಾಗ ನನ್ನ ಭಯ ದ್ವಿಗುಣಗೊಳ್ಳತೊಡಗಿತು. ಈ ರಾಜಕಾರಣದ ವಿರುದ್ಧ ಹೋರಾಟ ಮಾಡಬೇಕು, ಜನರನ್ನು ಸಂಘಟಿಸಬೇಕು ಅಂತ ಮನಸ್ಸು ಹೇಳುತ್ತಲೇ ಇತ್ತು.
ಅದೊಂದು ದಿನ ನನ್ನ ಪತ್ನಿ ಮಂಗಳೂರಿಗೆ ಬಂದಿದ್ದರು. ನನ್ನನ್ನು ನೋಡುತ್ತಲೇ ನೀವು ಕಾಲೇಜಿನಲ್ಲಿರುವಾಗ ರೆಬೆಲ್ ಆಗಿದ್ದೀರಲ್ಲಾ? ಈಗ ಅದೆಲ್ಲಾ ಎಲ್ಲಿಗೆ ಹೋಯಿತು? ಎಂದು ಕೇಳಿದರು. ಆ ರಾತ್ರಿ ನನಗೆ ನನ್ನ ಪತ್ನಿಯ ಮಾತಿನಿಂದ ನಿದ್ದೆ ಬರಲಿಲ್ಲ. ಬೆಳಗ್ಗೆ ಎದ್ದೊಡನೆ ನಾನು ಐಎಎಸ್ ಹುದ್ದೆಗೆ ರಾಜೀನಾಮೆ ಕೊಡುವೆ ಎಂದೆ. ತಟ್ಟನೆ ಆಕೆ, ಅದನ್ನು ಆಗಲೇ ಮಾಡಬೇಕಿತ್ತು. ತುಂಬಾ ತಡವಾಯಿತು. ಈಗಲಾದರು ಒಂದೊಳ್ಳೆಯ ನಿರ್ಧಾರಕ್ಕೆ ಬಂದಿರಲ್ಲಾ ಸಾಕು ಎಂದರು. ಹಾಗೇ ಮನೆಯಲ್ಲಿದ್ದ ಹೆತ್ತವರನ್ನು ಊರಿಗೆ ಕಳುಹಿಸಿದೆ. ಬಳಿಕ ರಾಜೀನಾಮೆ ಪತ್ರ ಬರೆದು ಬಿಟ್ಟೆ. ಆವಾಗಲೇ ಎನ್‌ಆರ್‌ಸಿ, ಸಿಎಎ ಜಾರಿಗೊಳಿಸಲು ಕೇಂದ್ರ ಸರಕಾರ ಮುಂದಾಯಿತು. ತಾನು ಅದರ ವಿರುದ್ಧದ ಹೋರಾಟದ ಒಂದು ಭಾಗವಾದೆ.
ದೇಶದ ಜಟಿಲ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ನಾನು ತಿಳಿದುಕೊಂಡಿದ್ದೆ. ಕಾಂಗ್ರೆಸ್‌ನ ಯಾರೂ ಕೂಡಾ ನನ್ನನ್ನು ಪಕ್ಷಕ್ಕೆ ಕರೆಯಲಿಲ್ಲ. ಸ್ವತಃ ನಾನೇ ಆಸಕ್ತಿ ವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡೆ. ಆ ಬಳಿಕ ಕಾಂಗ್ರೆಸ್ ನನಗೆ ಸಾಕಷ್ಟು ಅವಕಾಶ ಕಲ್ಪಿಸಿತು. ಅದರಂತೆ ತಮಿಳ್ನಾಡು, ಕರ್ನಾಟಕ, ರಾಜಸ್ತಾನ, ತೆಲಂಗಾಣ ಚುನಾವಣೆಯಲ್ಲಿ ಕೆಲಸ ಮಾಡಿದೆ. ಕೊನೆಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತು. ಕೇವಲ 15 ದಿನ ಮಾತ್ರ ನಾನಲ್ಲಿ ಚುನಾವಣಾ ಪ್ರಚಾರ ಮಾಡಿದೆ. ಮಂಗಳೂರು ಸಹಿತ ಕರ್ನಾಟಕದ ಅನೇಕ ಗೆಳೆಯರು ಬಂದು ಪ್ರಚಾರದಲ್ಲಿ ತೊಡಗಿಸಿಕೊಂಡರು. ನಿರೀಕ್ಷೆಗೂ ಮೀರಿ ಮತ ಪಡೆದು ಸಂಸದನಾದೆ.
ಯುವ ನಾಯಕ ರಾಹುಲ್ ಗಾಂಧಿ ದೇಶದ ಜನರಲ್ಲಿ ತಿಳುವಳಿಕೆ ಮೂಡಿಸುವಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಮೋದಿ ಅಥವಾ ಇನ್ಯಾರೇ ಆಗಲಿ, ದೇಶವು ಒಬ್ಬನಿಂದ ನಡೆಯಲು ಸಾಧ್ಯವಿಲ್ಲ. ಅದನ್ನು ರಾಹುಲ್ ಗಾಂಧಿ ಕೂಡ ಒಪ್ಪಲ್ಲ. ಸಾಮೂಹಿಕವಾಗಿ ಒಗ್ಗೂಡಿದರೆ ಮಾತ್ರ ದೇಶ ಅಭಿವೃದ್ಧಿಯಾಗಲಿದೆ. ಸಂವಿಧಾನ ರಕ್ಷಿಸಲ್ಪಡಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪಕ್ಷದ ಜೊತೆ ಹೆಜ್ಜೆ ಹಾಕಬೇಕು ಎಂದು ಸಸಿಕಾಂತ್ ಸೆಂಥಿಲ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ. ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಮುಡಾ ಮಾಜಿ ಅಧ್ಯಕ್ಷರಾದ ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಲ್ಲಾಳ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಆರ್. ಪೂಜಾರಿ, ಎಂ.ಎಸ್. ಮುಹಮ್ಮದ್, ರಕ್ಷಿತ್ ಶಿವರಾಂ, ಪಕ್ಷದ ಮುಖಂಡರಾದ ಕಣಚೂರು ಮೋನು, ಶಾಲೆಟ್ ಪಿಂಟೋ, ವಿಶ್ವಾಸ್ ಕುಮಾರ್ ದಾಸ್, ಎಂ.ಜಿ.ಹೆಗಡೆ, ಆಯಿಶಾ ಫರ್ಝಾನಾ ಯು.ಟಿ., ಎ.ಸಿ.ವಿನಯರಾಜ್, ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜ, ಸಮೀರ್ ಪಜೀರ್, ಶಶಿಧರ ಹೆಗ್ಡೆ. ಚೇತನ್, ಅಬ್ಬಾಸ್ ಅಲಿ, ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಶಾಸಕ ಜೆ.ಆರ್.ಲೋಬೊ ಸ್ವಾಗತಿಸಿದರು. ಡೆನಿಸ್ ಡಿಸಿಲ್ವ ವಂದಿಸಿದರು.ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.