ಗುತ್ತಿಗೆದಾರನ ಮನೆಗೆ ಐಟಿ ದಾಳಿ ಪ್ರಕರಣ: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜೀನಾಮೆ ನೀಡಲು ನಳಿನ್ ಆಗ್ರಹ
ಮಂಗಳೂರು, ಅ.13: ಬೆಂಗಳೂರಿನ ಗುತ್ತಿಗೆದಾರ ಅಂಬಿಕಾಪತಿಯ ಮನೆಗೆ ನಡೆದ ಐಟಿ ದಾಳಿಯಲ್ಲಿ 23 ಬಾಕ್ಸ್‌ಗಳಲ್ಲಿ ಪತ್ತೆಯಾದ 42 ಕೋ.ರೂ. ಕಮಿಷನ್ ಹಣ ಎಂಬುದು ಬಹಿರಂಗವಾಗಿದೆ. ಹಾಗಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್‌ನ ಎಟಿಎಂ ಸರಕಾರ ಆಡಳಿತ ನಡೆಸುತ್ತಿದೆ. ಕೆಲವು ದಿನಗಳ ಹಿಂದೆ 600 ಕೋ.ರೂ. ಬಾಕಿ ಮೊತ್ತವನ್ನು ಸರಕಾರ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿತ್ತು. ತೆಲಂಗಾಣ ಚುನಾವಣೆಗೆ ಸಂಗ್ರಹಿಸಲಾದ ಕಮಿಷನ್ ಹಣ ಇದಾಗಿದೆ ಎಂಬ ಮಾಹಿತಿ ಇದೆ ಎಂದರು.
ಕೆಲವು ಅಧಿಕಾರಿಗಳೇ ಈ ಹಿಂದೆ ರಾಜ್ಯಪಾಲರಿಗೆ ಸರಕಾರದ ಕಮಿಷನ್ ಬಗ್ಗೆ ದೂರು ಕೊಟ್ಟಿದ್ದರು. ಅಧಿಕಾರಿಗಳ ವರ್ಗಾವಣೆಗೆ ದರ ಪಿಕ್ಸ್ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಸುಳ್ಳು ಭರವಸೆ ಕೊಟ್ಟ ಸರಕಾರ ಎಂಬುದು ಇದೀಗ ಸಾಬೀತಾಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಕರ್ನಾಟಕ ಸಂಪೂರ್ಣ ಕತ್ತಲೆಯಲ್ಲಿದೆ, ವಿದ್ಯುತ್ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗುತ್ತಿದೆ ಎಂದ ಅವರು, ಕಾಂಗ್ರೆಸ್ ದೇಶದಲ್ಲಿ ಭೌದ್ಧಿಕವಾಗಿಯೂ ದಿವಾಳಿಯಾಗಿದೆ. ಇಸ್ರೇಲ್ ಯುದ್ಧದ ವಿಚಾರದಲ್ಲಿ ಭಯೋತ್ಪಾದಕರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಫೆಲೆಸ್ತೀನ್ ಪರ ಕಾಂಗ್ರೆಸ್ ಮತ್ತು ಅದರ ಒಕ್ಕೂಟ ನಿಂತಿದೆ ಎಂದು ನಳಿನ್ ಆರೋಪಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸಂಸದ ಸದಾನಂದ ಗೌಡ ಅಪಸ್ವರ ಎತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದರು.
ಬಿಜೆಪಿಯ 42 ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಉಪ ಮುಖ್ಯಮಂತ್ರಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ನಳಿನ್ ‘ಕಾಂಗ್ರೆಸ್ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ಯಾವಾಗ ಎಂಬ ಪ್ರಶ್ನೆಗೂ ‘ವರಿಷ್ಠರು ಆಯ್ಕೆ ಮಾಡುತ್ತಾರೆ’ ಎಂದಷ್ಟೆ ನಳಿನ್ ಉತ್ತರಿಸಿದರು.