ಬೆಳ್ತಂಗಡಿ| ಪೊಲೀಸ್ ದೌರ್ಜನ್ಯದಿಂದ ಯುವಕ ಸಾವು ಎಂಬುದು ಸುಳ್ಳು ಸುದ್ದಿ; ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ
ಸಾಂದರ್ಭಿಕ ಚಿತ್ರ
ಬೆಳ್ತಂಗಡಿ: ಪೊಲೀಸ್ ದೌರ್ಜನ್ಯದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನೋರ್ವ ಸಾವನ್ನಪ್ಪಿದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.
"ಬೆಳ್ತಂಗಡಿ ಪೊಲೀಸರು NIA ಅಧಿಕಾರಿಗಳೊಂದಿಗೆ ಸೇರಿ ಅಮಾಯಕ ಮುಸ್ಲಿಂ ಯುವಕನ ಮರ್ಮಾಂಗಕ್ಕೆ ತುಳಿದು ಚಿತ್ರಹಿಂಸೆ ನೀಡಿದ್ದರು. ತೀವ್ರ ನಿಗಾ ಘಟಕದಲ್ಲಿದ್ದ ಯುವಕ ಮರಣಹೊಂದಿದ್ದಾನೆ" ಎಂಬ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ ಪೊಲೀಸರಿಂದ ಹಲ್ಲೆಗೊಳಗಾಗಿದ್ದಾನೆ ಎನ್ನಲಾದ ವ್ಯಕ್ತಿಯು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಪ್ರಾಣಾಪಾಯ ಸಂಭವಿಸಿಲ್ಲ ಎಂದು ದೃಢಪಟ್ಟಿದೆ.
ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ 16 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಒಂದು ಮನೆ ಹಾಗೂ ಬೆಳ್ತಂಗಡಿ, ಸುಳ್ಯ ಹಾಗೂ ಕೆಯ್ಯೂರು ಮೂಲದ ವ್ಯಕ್ತಿಗಳ ಮನೆಯಲ್ಲಿ ಎನ್ಐಎ ತನಿಖಾಧಿಕಾರಿಗಳ ತಂಡ ಶೋಧ ನಡೆಸಿತ್ತು. ಅದರಲ್ಲೂ ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಮದ್ದಡ್ಕಕ್ಕೆ ಆಗಮಿಸಿದ ಎನ್ಐಎ ತಂಡ ಆರೋಪಿಗಾಗಿ ಹುಡುಕಾಟ ನಡೆಸಿತ್ತು.