ನಾಗರಿಕ ಸಮಾಜ ಎಚ್ಚೆತ್ತುಕೊಳ್ಳುವ ಕಾಲವಿದು: ಫಾ. ಸೆಡ್ರಿಕ್ ಪ್ರಕಾಶ್
ಮಣಿಪುರ ಹಿಂಸಾಚಾರ
(ಹಿರಿಯ ಚಿಂತಕರಾದ ಶಿವಸುಂದರ್ ಮಾತನಾಡುತ್ತಿರುವುದು)
ಮಂಗಳೂರು: ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದ್ದು, ಇದರ ವಿರುದ್ಧ ಸಮಾಜ ಸೆಟೆದು ನಿಲ್ಲುವ, ಧ್ವನಿ ಎತ್ತುವ ಕಾಲ ಇದಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಫಾ. ಸೆಡ್ರಿಕ್ ಪ್ರಕಾಶ್ ಅಭಿಪ್ರಾಯಿಸಿದ್ದಾರೆ.
ನಗರದ ರೋಶನಿ ನಿಲಯ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಮಂಗಳೂರು ಸಮಾನ ಮನಸ್ಕ ನಾಗರಿಕರಿಂದ ಆಯೋಜಿಸಲಾದ ‘ಮಣಿಪುರ ಫೈಲ್ಸ್’, ವರ್ತಮಾನದ ರಾಜಕೀಯವೇನು? ಭವಿಷ್ಯದ ಪರಿಹಾರವೇನು? ಎಂಬ ವಿಚಾರ ಮಂಥನದಲ್ಲಿ ಮಾತನಾಡಿದರು.
ಬುಡಕಟ್ಟು ಜನಾಂಗವೊಂದರ ವಿರುದ್ಧ ವ್ಯವಸ್ಥಿತವಾಗಿ ಸಾಮೂಹಿಕ ನರಮೇಧ, ಅತ್ಯಾಚಾರ, ಹಿಂಸಾಚಾರ ನಡೆದರೂ ಪ್ರಧಾನಿ ಮೌನ ವಹಿಸುತ್ತಾರೆ. ರಾಜ್ಯದ ಮುಖ್ಯಮಂತ್ರಿ ಅದು ರಾಜ್ಯದ ವಿಷಯ ಹೊರಗಿನವರು ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ ಎನ್ನುತ್ತಾರೆ. ಆದರೆ ಅದು ಕೇವಲ ರಾಜ್ಯದ ವಿಷಯವಾಗಿಲ್ಲ. ಅದು ದೇಶದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅದು ಎರಡು ಜನಾಂಗಗಳ ನಡುವಿನ ದ್ವೇಷವಾಗಿ ಉಳಿದಿಲ್ಲ. ಬದಲಾಗಿ ದೇಶವನ್ನೇ ಆವರಿಸುತ್ತಿರುವ ದ್ವೇಷವಾಗಿ ಮಾರ್ಪಟ್ಟಿದೆ. ಈ ಬಗ್ಗೆ ನಾಗರಿಕ ಸಮಾಜ ಒಗ್ಗಟ್ಟಾಗಬೇಕಾಗಿದೆ ಎಂದು ಕರೆ ನೀಡಿದರು.
ನಿರ್ಭಯಾ ಪ್ರಕರಣದಲ್ಲಿ ದೇಶದ ಜನರಲ್ಲಿ ಕಂಡುಬಂದ ಆಕ್ರೋಶ ಮಣಿಪುರದ ಹಿಂಸಾಚಾರದ ಬಗ್ಗೆ ಕಂಡು ಬಾರದಿರು ವುದು ದುರಂತ. ಮಣಿಪುರದ ಘಟನೆಗಳನ್ನು ಖಂಡಿಸಿ ಅಲ್ಲಲ್ಲಿ ಸಾಂಕೇತಿಕ ಪ್ರತಿಭಟನೆ, ವಿರೋಧಗಳು ವ್ಯಕ್ತವಾಗಿದೆಯಾ ದರೂ ನಾಗರಿಕ ಸಮಾಜದಿಂದ ಸಂವಿಧಾನದ ರಕ್ಷಣೆ, ಪ್ರಜಾತಂತ್ರದ ರಕ್ಷಣೆಗಾಗಿ ಮಣಿಪುರದ ಘಟನೆ ವಿರುದ್ಧ ಸಾಮೂ ಹಿಕ ವಿರೋಧ ವ್ಯಕ್ತವಾಗಬೇಕಾಗಿದೆ. ದ್ವೇಷ ರಾಜಕಾರಣಕ್ಕೆ ಪ್ರತಿಯಾಗಿ ಶಾಂತಿಯ ಸಂದೇಶವನ್ನು ನೀಡಬೇಕಾಗಿದೆ ಎಂದು ಅವರು ಹೇಳಿದರು.
ಹಿರಿಯ ಚಿಂತಕರಾದ ಶಿವಸುಂದರ್ ಅವರು ಮಣಿಪುರದ ಇತಿಹಾಸ, ಸ್ವಾತಂತ್ರ್ಯ ಪೂರ್ವದಿಂದ ಜನಾಂಗಗಳ ನಡುವಿನ ಸಂಘರ್ಷ, ಕಣಿವೆಯಲ್ಲಿ ಬಹುಸಂಖ್ಯೆಯಲ್ಲಿರುವ ಮೈತೈ ಹಾಗೂ ಬೆಟ್ಟಗುಡ್ಡಗಳ ತಪ್ಪಲಲ್ಲಿ ವಾಸಿಸುತ್ತಿರುವ ಕುಕಿ ಹಾಗಾ ನಾಗಾ ಜನಾಂಗಗಳ ಅಂದಿನ ಹಾಗೂ ಇಂದಿನ ಸಂಘರ್ಷಗಳ ಕುರಿತಂತೆ ವಿಸ್ತೃತ ಮಾಹಿತಿ ನೀಡಿದರು.
ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ದೇಶದ ಜನರ ಅಂತಾರಾತ್ಮವನ್ನು ಬಡಿದೆಬ್ಬಿಸಿದರೂ ಪ್ರಧಾನಿ ನರೇಂದ್ರ ಮೋದಿಯವರು ಮೌನ ವಹಿಸಿರುವ ವಿರುದ್ಧ ಸ್ಪಷ್ಟ ಉದ್ದೇಶವಿದೆ ಎಂದು ಹೇಳಿದ ಅವರು, ಅಲ್ಲಿನ ಕುಕಿ ಜನಾಂಗದ ವಿರುದ್ಧ ಪ್ರಸ್ತುತ ಸುಳ್ಳು ಪ್ರಚಾರಗಳ ಮೂಲಕ ದೇಶದ್ರೋಹಿಗಳನ್ನಾಗಿಸುತ್ತಿರುವ ಹಿಂದೆ ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆ ಎಂದು ಆರೋಪಿಸಿದರು.
ಮಣಿಪುರದಲ್ಲಿ ಜನಾಂಗಗಳ ನಡುವಿನ ಸಂಘರ್ಷ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಬಿಜೆಪಿ ಹಾಗೂ ಆರ್ಎಸ್ಎಸ್ನ ಪ್ರವೇಶವಾಗುತ್ತಿದ್ದಂತೆಯೇ ಅದು ಧರ್ಮಗಳ ನಡುವಿನ ಸಮರವಾಗಿ ಮಾರ್ಪಟ್ಟಿದೆ. ಮಹಿಳೆಯರ ದೇಹವನ್ನು ಜನಾಂಗೀಯ ದ್ವೇಷದ ರಣರಂಗವಾಗಿ ಬಳಸುವಂತದ್ದು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದ್ದು, ಅದರ ಭಾಗವಾಗಿಯೇ ಮಣಿಪುರದ ಹಿಂಸಾಚಾರ ನಡೆದಿದೆ ಎಂದು ಅವರು ವಿಶ್ಲೇಷಿಸಿದರು.
ಭಾರತದ ಪ್ರಜಾತಂತ್ರದಲ್ಲಿ ಸಂವಿಧಾನದ ಮಹತ್ವವನ್ನು ಸಾರುವ ಜತೆಗೆ ಐತಿಹಾಸಿಕ ಅಸಮಾನತೆ, ತಾರತಮ್ಯವನ್ನು ನಿವಾರಿಸಲು ಸಮಪಾಲಿನ ರಾಜಕಾರಣ, ಸಾಮಾಜಿಕ ನ್ಯಾಯದ ಮೌಲ್ಯವನ್ನು ಎತ್ತಿಹಿಡಿಯುವ ಕಾರ್ಯ ಆಗಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಸಿಲ್ವಿಯಾ ಡಿಸೋಜಾ, ರಾಜೇಂದ್ರ ಕುಮಾರ್, ವಿದ್ಯಾ ದಿನಕರ್ ಮೊದಲಾದರು ಭಾಗವಹಿಸಿದ್ದರು.