ಜೆಪ್ಪು: ಡಿ.22ರಂದು ಕ್ರಿಸ್ಮಸ್ ಸಂಭ್ರಮಾಚರಣೆ
ಮಂಗಳೂರು, ಡಿ.18: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಡಿ.22ರಂದು ಜೆಪ್ಪುವಿನ ಸೈಂಟ್ ಅಂತೋನಿ ಆಶ್ರಮದ ತೆರೆದ ಮೈದಾನದಲ್ಲಿ 9ನೇ ವರ್ಷದ ಕ್ರಿಸ್‌ಮಸ್ ಸಂಭ್ರಮಾಚರಣೆ ಮತ್ತು ಕ್ರಿಸ್ಮಸ್ ಕ್ಯಾರಲ್ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾರ್ಪೊರೇಟರ್ ನಾಗೇಂದ್ರ ಕುಮಾರ್, ಪ್ರತೀ ವರ್ಷದಂತೆ ಈ ಬಾರಿ ಕೂಡ ವಿಜೃಂಬಣೆಯಿಂದ ಕಾರ್ಯಕ್ರಮ ನಡೆಯಲಿದೆ. ಡಿ.22ರಂದು ಸಂಜೆ 4ರಿಂದ ಕ್ಯಾರಲ್ ಸಂಗೀತ ಸ್ಪರ್ಧೆ ನಡೆಯಲಿದೆ. 6 ಗಂಟೆಯ ಬಳಿಕ ಸರ್ವಧರ್ಮಗಳ ಕ್ರಿಸ್ಮಸ್ ಸಂಗಮ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ದಾನ ಉದ್ಘಾಟಿಸಲಿದ್ದಾರೆ ಎಂದರು.
ಕ್ಯಾರಲ್ ಸ್ಪರ್ಧೆಯಲ್ಲಿ ಬಾಗವಹಿಸಲು ಈಗಾಗಲೇ ನೂರಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಡಿ.21ರವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ನಗದು ಬಹುಮಾನವನ್ನು ನೀಡಲಾಗುವುದು ಎಂದು ನಾಗೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಕಾರ್ಪೊರೇಟರ್ ಭಾಸ್ಕರ ರಾವ್, ಪ್ರಮುಖರಾದ ಮೀನಾ ಟೆಲ್ಲಿಸ್, ಸತೀಶ್ ಪೆಂಗಲ್, ಕ್ರಿಸ್ಟನ್ ಮಿನೇಜಸ್ ಉಪಸ್ಥಿತರಿದ್ದರು.