ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಯೋಗ ಮೇಳ
ಮಂಗಳೂರು, ಆ.23: ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಪ್ಲೇಸ್ಮೆಂಟ್ ಸೆಲ್,ಆಂತರಿಕ ಗುಣಮಟ್ಟ ಖಾತರಿ ಕೋಶ, ಶಿಕ್ಷಕ ರಕ್ಷಕ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಹಯೋಗದಲ್ಲಿ ಮಂಗಳವಾರ ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಯೋಗ ಮೇಳ ವನ್ನು ಆಯೋಜಿಸಲಾಯಿತು.
ಪ್ರಾವಿಟ್ ಫುಡ್ ಪ್ರೈವೇಟ್ ಲಿಮಿಟೆಟ್‌ನ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿ ‘ಕಾಲ ಬದಲಾದಂತೆ ಉದ್ಯೋಗದ ಸ್ವರೂಪವು ಬದಲಾಗುತ್ತಿದೆ. ಹಾಗಾಗಿ ಉದ್ಯೋಕಾಂಕ್ಷಿಗಳು ಬದಲಾದ ಉದ್ಯೋಗದ ಅವಶ್ಯಕತೆಗಳಿಗನುಗುಣವಾಗಿ ಸೂಕ್ತ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ’ ಎಂದು ಹೇಳಿದರು.
ಕಾಲೇಜಿನ ಸಂಚಾಲಕ ವಂ. ಬೊನವೆಂಚರ್ ನಝರತ್ ಅಧ್ಯಕ್ಷತೆ ವಹಿಸಿ ಮಾತನಾಡಿ ‘ತನ್ನ ವಿದ್ಯಾಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಹಾಗೂ ಅರ್ಹ ವಿದ್ಯಾವಂತರಿಗೆ ಸೂಕ್ತ ಉದ್ಯೋಗಾವಕಾಶ ಗಳನ್ನು ಕಲ್ಪಿಸಿಕೊಡುವುದು ಪ್ರತಿ ವಿದ್ಯಾ ಸಂಸ್ಥೆಯ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಮಿಲಾಗ್ರಿಸ್ ಚರ್ಚ್ ಪಾಲನಾಸಮಿತಿಯ ಉಪಾಧ್ಯಕ್ಷ ಅಲ್ಫೋನ್ಸ್ ಸಿಲ್ವೆಸ್ಟರ್ ಮಸ್ಕರೇನ್ಹಸ್ ,ಹಂಪನಕಟ್ಟೆ ಎಸ್ಬಿಐ ಬ್ರಾಂಚ್ ಮ್ಯಾನೇಜರ್ ಸುಹಾಸ್ ಎಸ್ ಉಡುಪ, ಹಳೆ ವಿದ್ಯಾರ್ಥಿ ಸಮಿತಿಯ ಅಧ್ಯಕ್ಷೆ ರೈನಾ ಡಿ’ಕುನ್ಹಾ ಉಪಸ್ಥಿತರಿದ್ದರು
ಸುಮಾರು 70 ಕಂಪೆನಿಗಳ ಭಾಗವಹಿಸುವಿಕೆ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಗಳನ್ನೊಳಗೊಂಡಂತೆ ಸುಮಾರು 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉದ್ಯೋಗದಾತರು ಈ ಉದ್ಯೋಗಮೇಳದ ಪ್ರಯೋಜನವನ್ನು ಪಡೆದರು.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ರೆ. ಫಾ ಮೈಕೆಲ್, ಸಾಂತುಮಯೋರ್ ಸ್ವಾಗತಿಸಿದರು, ಉಪನ್ಯಾಸಕಿ ವಿನೀತಾ ಕಾರ್ಯಕ್ರಮ ನಿರೂಪಿಸಿ, ಪ್ಲೇಸ್ಮೆಂಟ್ ಅಧಿಕಾರಿ ಅದಿರಾ ವಂದಿಸಿದರು.