ಜೂ: 29-30: ಕದ್ರಿ ಕಂಬಳದಲ್ಲಿ ಮಾವು-ಹಲಸು ಮೇಳ

ಮಂಗಳೂರು,ಜೂ.26: ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಸಮೃದ್ಧ ಫಲಗಳಾದ ಮಾವು - ಹಲಸು ಮೇಳ ಜೂನ್ 29 ಹಾಗೂ 30ರಂದು ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜು ಪ್ರಸಾದದ ಆವರಣದಲ್ಲಿ ಏರ್ಪಡಿಸಲಾಗಿದೆ. ಎಂದು ಆಯೋಜಕರಾದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ ಕಲ್ಕೂರ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಮಾತನಾಡಿದ ಅವರು, ನಾಡು ನುಡಿ ಜಾಗೃತಿ ಸಮ್ಮೇಳನ ಸರಣಿ ಕಾರ್ಯಕ್ರಮದ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಮಾವು ಹಲಸು ಮೇಳವನ್ನು ಹಿರಿಯ ಸಾಮಾಜಿಕ ಕಾರ್ಯಕರ್ತೆ ಹಾಗೂ ಕದ್ರಿ ಫಲಪುಷ್ಪ ಪ್ರದರ್ಶನದ ಗೌರವಾಧ್ಯಕ್ಷೆ ಆರೂರು ಲಕ್ಷ್ಮೀ ರಾವ್ ಉದ್ಘಾಟಿಸಲಿರುವರು
ಅವರು ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣರು ದೀಪ ಬೆಳಗುವ ಮೂಲಕ ಶುಭ ಹಾರೈಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಕೃಷಿ ತಜ್ಞ ಪಡ್ರೆ ಉದ್ಯಮಿ ಎ.ಜೆ. ಶೆಟ್ಟಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾರ್ಪೋರೇಟರ್‌ಗಳಾದ ಶಶಿಧರ ಹೆಗ್ಡೆ, ಶಕಿಲಾ ಕಾವ, ಮನೋಹರ ಶೆಟ್ಟಿ, ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಶರವು ರಾಘವೇಂದ್ರ ಶಾಸ್ತ್ರಿ, ಡಾ. ಹರಿಕೃಷ್ಣ ಪುನರೂರು, ಡಾ.ಎಂ.ಬಿ. ಪುರಾಣಿಕ್, ಕ್ಯಾ.ಗಣೇಶ್ ಕಾರ್ಣಿಕ್, ಡಾ. ಜೀವರಾಜ್ ಸೊರಕೆ, ರಘುನಾಥ ಸೋಮಯಾಜಿ, ಪ್ರಕಾಶ್ ಕಲ್ಬಾವಿ, ರತ್ನಾಕರ ಜೈನ್, ಪತ್ರಕರ್ತ ಎ.ಆರ್. ಸುಬ್ಬಯ್ಯಕಟ್ಟೆ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್, ಮಂಗಳೂರು ಪ್ರೆಸ್ ಕ್ಲಬ್‌ನ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ತುಮುಡಿ ಸೂರ್ಯನಾರಾಯಣ ರಾವ್ ಮೊದಲಾದವರು ಭಾಗವಹಿಸಲಿರುವರು
ಸಾವಯವ ಕೃಷಿಕರಿಗೆ ಸನ್ಮಾನ : ಬೆಂಗಳೂರು ಗ್ರಾಮಾಂತರ ಪ್ರದೇಶದ ತೂಗುಕೆರೆಯ ಕೃಷಿಕ ಹಲಸು ಹಾಗೂ ಹೂವಿನ ಬೆಳೆಗಾರ ಮುನಿರಾಜು ಹಾಗೂ ಅರಸಿಕೆರೆಯ ಮಾವು ಬೆಳೆಗಾರ ರಘು ಇವರನ್ನು ಸನ್ಮಾನಿಸಲಾಗುವುದು.
ರಾಮನಗರ, ಮಂಡ್ಯ, ಮೈಸೂರು, ಬೆಳಗಾಂ ಹಾಗೂ ಸ್ಥಳೀಯ ಕೃಷಿಕರು ಭಾಗವಹಿಸಲಿದ್ದಾರೆ. ರುದ್ರಾಕ್ಷ, ಚಂದ್ರಬರ್ಕೆ ಮತ್ತಿತರ ವಿವಿಧ ತಳಿಯ ಹಲಸು, ಮಾವಿನ ಹಣ್ಣುಗಳಾದ ಮಲ್ಲಿಕಾ, ಮತ್ತೋವ, ನೀಲಂ, ಕಾಳಪಾಡಿ, ಬಾದಾಮಿ, ತೋತಾಪುರಿ ಲಭ್ಯವಿರುತ್ತದೆ. ಮಾವು ಹಲಸಿನಿಂದ ತಯಾರಿಸಿದ ಮೌಲ್ಯವರ್ಧಿತ ಸ್ವಾವಲಂಬಿ ಖಾದ್ಯಗಳಾದ ಹಲಸಿನ ಕಬಾಬ್, ಹಲಸಿನ ಗಾರಿಗೆ, ಚಿಪ್ಸ್, ಉಂಡ್ಳಕ್ಕ, ಹಲಸಿನ ಪಾವುಬಾಜಿ, ಕಡುಬು, ಹಲಸಿನ ಕೇಕ್, ಹೋಳಿಗೆ, ಹಪ್ಪಳ, ಉಪ್ಪಿನಕಾಯಿ, ಐಸ್‌ಕ್ರೀಂ ಇತ್ಯಾದಿಗಳಲ್ಲದೆ, ವಿವಿಧ ಮಾವು ಹಲಸಿನ ಗಿಡಗಳು, ದೇಸಿ ತರಕಾರಿ ಬೀಜಗಳು, ಸಸಿಗಳು, ಕೃಷಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳು ಒಟ್ಟು 40 ಸ್ಟಾಲ್‌ಗಳು ಲಭ್ಯವಿರಲಿವೆ ಎಂದು ಎಸ್. ಪ್ರದೀಪ್ ಕುಮಾರ ಕಲ್ಕೂರ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗದ ರತ್ನಾಕರ ಕುಳಾಯಿ, ಪ್ರಮುಖರಾದ ಶಿವಪ್ರಸಾದ್ ಪ್ರಭು, ಜನಾರ್ದನ ಹಂದೆ, ಡಾ. ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.