ಕಣಚೂರು ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ
'ಆಯುರ್ ರಕ್ಷಾ ಕವಚ್' ಆರೋಗ್ಯ ಕಾರ್ಡ್ ಬಿಡುಗಡೆ
ಕೊಣಾಜೆ: ಕಣಚೂರು ಆರ್ಯುವೇದ ಆಸ್ಪತ್ರೆ ದೇರಳಕಟ್ಟೆ ನಾಟೆಕಲ್ ಇದರ ವತಿಯಿಂದ 25 ನೇ ಕಾರ್ಗಿಲ್ ವಿಜಯ ದಿನಚರಣೆ ಹಾಗೂ 'ಆಯುರ್ ರಕ್ಷಾ ಕವಚ್' ಆರೋಗ್ಯ ಕಾರ್ಡ್ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ ಕಣಚೂರು ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್(ಐಪಿಎಸ್) ಅವರು, ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ದ ದ ಗೆಲುವು ಭಾರತೀಯರ ಒಗ್ಗಟ್ಟು ಹಾಗೂ ಯೋಧರ ಹೋರಾಟದ ಫಲವಾಗಿದೆ. ಭಾರತೀಯರ ಒಗ್ಗಟ್ಟು, ಸಹಬಾಳ್ವೆ ಸದಾಕಾಲ ಹಸಿರಾಗಿರಬೇಕು ಎಂದರು.
ಸದಾ ನಮ್ಮಲ್ಲಿ ರಾಷ್ಟ್ರ ಪ್ರೇಮ ಜಾಗೃತವಾಗಿರಬೇಕು. ಮುಖ್ಯವಾಗಿ ನಮ್ಮ ರಾಷ್ಟ್ರವು ಸುಮಾರು 65% ಯುವ ಜನತೆ ಇರುವ ರಾಷ್ಟ್ರವಾಗಿದೆ. ಯುವಜನತೆ ದೇಶದ ಸಂಸ್ಕೃತಿ ಹಾಗೂ ದೇಶಪ್ರೇಮವನ್ನು ಮೈಗೂಡಿಸಿಕೊಂಡು ಮುನ್ನಡೆದರೆ ದೇಶವು ಇನ್ನಷ್ಟು ಸದೃಢವಾಗಬಲ್ಲುದು. ಯುವ ಸಮುದಾಯ ಯಾವುದೇ ಕೋಮುದ್ವೇಷ, ಜಾತಿ ಬೇಧ, ಡ್ರಗ್ಸ್ ಮಾಫಿಯಾಗಳಿಗೆ ಬಲಿಯಾಗದೆ ಉತ್ತಮ ಮೌಲ್ಯಯುತ ಶಿಕ್ಷಣ ಮತ್ತು ಕಾರ್ಯದೊಂದಿಗೆ ದೇಶ ಕಟ್ಟುವ ಕೆಲಸ ಮಾಡಬೇಕು ಎಂದರು.
ಇದೇ ಸಂದ ಕಣಚೂರು ಆಯುರ್ ರಕ್ಷಾ ಕವಚ್ ಆರೋಗ್ಯ ಕಾರ್ಡ್ ನ್ನು ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಸೇನಾಧಿಕಾರಿ ಕ್ಯಾ.ಬೆಳ್ಳಾಲ ಗೋಪಿನಾಥ್ ರಾವ್ ಅವರು ಮಾತನಾಡಿ, ಕಾರ್ಗಿಲ್ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಯು.ಕೆ.ಮೋನು ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಏಳನೇ ಬಟಾಲಿಯನ್ ನ ಪೊಲೀಸ್ ಇನ್ಸ್ಪೆಕ್ಟರ್ ಗಣೇಶ್ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ ನ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಅವರು 'ಆಯುರ್ ರಕ್ಷಾ ಕವಚ್ ' ಆರೋಗ್ಯ ಕಾರ್ಡ್ ನ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಣಚೂರು ವೈದ್ಯಕೀಯ ಅರ್ಯುವೇದ ಕಾಲೇಜಿನ ವೈದ್ಯಕೀಯ ಸಲಹೆಗಾರ ಡಾ. ಸುರೇಶ್ ನೆಗಲಗುಳಿ, ಮೆಡಿಕಲ್ ಸುಪರಿಡೆಂಟ್ ಡಾ.ಕಾರ್ತಿಕೇಯ ಪ್ರಸಾದ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ನ ಡೀನ್ ಡಾ.ಶಹನವಾಝ್, ಡಾ.ರೋಹನ್ ಮೋನಿಸ್, ಡಾ.ಶಮೀಮ, ಡಾ.ಹರೀಶ್ ಶೆಟ್ಟಿ, ಮಹಮ್ಮದ್ ಸುಹೈಲ್ ಮೊದಲಾದವರು ಉಪಸ್ಥಿತರಿದ್ದರು.
ಕಣಚೂರು ಆರ್ಯುವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಡಾ.ವಿದ್ಯಾಪ್ರಭಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುರೇಶ್ ನೆಗಲಗುಳಿ ವಂದಿಸಿದರು.