ಕಾವೇರಿ ವಿಚಾರದಲ್ಲಿ ಸಂಸದರು ದಿಲ್ಲಿಯಲ್ಲಿ ಧ್ವನಿಯೆತ್ತಬೇಕಿದೆ: ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್ (Photo: X@dineshgrao)
ಮಂಗಳೂರು, ಸೆ.20: ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮಾತನಾಡಿ ಹೋರಾಟ ಮಾಡಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ವಸ್ತುಸ್ಥಿತಿ ಅಧ್ಯಯನ ಮಾಡಿ ರಿಯಾಲಿಟಿ ಮೇಲೆ ಹೋಗಬೇಕಿದೆ. ರಾಜ್ಯದಲ್ಲಿ ಮಳೆ ಕೂಡ ಕಡಿಮೆಯಾಗಿದ್ದು, ತಮಿಳುನಾಡಿಗೆ ಬಿಡಲು ನಮ್ಮಲ್ಲೇ ನೀರು ಇಲ್ಲ. ಆದ್ದರಿಂದ ಈ ಬಗ್ಗೆ ರಾಜಕೀಯವಾಗಿಯೂ ಎಲ್ಲರೂ ಒಗ್ಗಟ್ಟಾಗಿ ಚರ್ಚಿಸೋಣ ಎಂದರು.
ಕಾವೇರಿ ವಿಚಾರವಾಗಿ ರಾಜ್ಯದ ಸಂಸದರು ದಿಲ್ಲಿಯಲ್ಲಿ ಮಾತನಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರ ಸಮಯ ಕೇಳಿದ್ದಾರೆ ಎಂದರು.
ಮೂವರು ಡಿಸಿಎಂ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಮೂವರು ಡಿಸಿಎಂ ಮಾಡಿದರೆ ತಪ್ಪೇನಿಲ್ಲ, ಆದರೆ ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈ ಬಗ್ಗೆ ಬಹಿರಂಗ ಚರ್ಚೆ ಅಗತ್ಯ ಇಲ್ಲ ಎಂದರು.
ಸಿ.ಟಿ.ರವಿ ಸೋತು ಸುಣ್ಣವಾಗಿದ್ದಾರೆ, ಅವರು ಸುಮ್ಮನಿದ್ದರೆ ಒಳ್ಳೆಯದು. ಅವರನ್ನು ವಿಧಾನಸಭೆಯಿಂದಲೂ ಜನ ಮನೆಗೆ ಕಳಿಸಿದ್ರು, ಪಕ್ಷದಲ್ಲೂ ದಿಲ್ಲಿಯಿಂದ ವಾಪಸ್ ಕಳುಹಿಸಿದ್ದಾರೆ. ಅನಾವಶ್ಯಕವಾಗಿ ಬಾಯಿ ತೆಗೆಯೋದು ಸರಿಯಲ್ಲ. ಅವರಿಗೆ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ. ಅವರಿಗೆ ಸುದ್ದಿಯಲ್ಲಿ ಇರಬೇಕು ಅನ್ನೋ ಹವ್ಯಾಸ ಆಗಿದೆ ಎಂದು ಟೀಕಿಸಿದರು.
ಚುನಾವಣಾ ಪೂರ್ವದಲ್ಲೂ ಕಾಂಗ್ರೆಸ್ ನಲ್ಲಿ ಒಗ್ಗಟ್ಟಿಲ್ಲ ಅಂತ ಹೇಳಿದ್ದರು. ಆದರೆ ನಾವು ಒಗ್ಗಟ್ಟಾಗಿ ಕೆಲಸ ಮಾಡಿ ಕೊನೆಗೆ ಏನಾಯಿತು ಅಂತ ಗೊತ್ತಿದೆ. ಈಗಲೂ ನಾವು ಒಗ್ಗಟ್ಟಲ್ಲಿ ಇದ್ದೇವೆ ಎಂದರು.
ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಕ್ಕೆ ಚಿಂತನೆ
ಹುಕ್ಕಾ ಬಾರ್ ಗಳಿಂದ ತೊಂದರೆ ಆಗುತ್ತಿದೆ, ಸಾರ್ವಜನಿಕರಿಗೆ ಅನಾರೋಗ್ಯ ಕಾಡುತ್ತಿದೆ. ಹಾಗಾಗಿ ಕಾಯ್ದೆಗೆ ತಿದ್ದುಪಡಿ ಮಾಡಿ ಬದಲಾವಣೆ ತರಲು ಬಯಸಿದ್ದೇವೆ ಎಂದು ರಾಜ್ಯ ಆರೋಗ್ಯ ಸಚಿವರು ಆಗಿರುವ ದಿನೇಶ್ ಗುಂಡೂರಾವ್ ತಿಳಿಸಿದರು.
ಹುಕ್ಕಾ ಬಾರ್ ಗಳು ಬೇರೆ ಬೇರೆ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಅದರಲ್ಲಿ ಬೇರೆ ಮಿಶ್ರಣ ಮಾಡಿ ಹಾಕುವಂಥದ್ದು ಕಂಡುಬಂದಿದೆ. ಇಂಥದ್ದನ್ನ ನಿಯಂತ್ರಣ ಮಾಡೋದು ಬಹಳ ಕಷ್ಟ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹುಕ್ಕಾ ಬಾರ್ ಇರಬಾರದು. ಬಾರ್, ರೆಸ್ಟೋರೆಂಟ್ ಗಳಲ್ಲಿ ಅದು ಇರಬಾರದು ಅನ್ನೋದು ವಿಚಾರದಲ್ಲಿ ಈ ಚಿಂತನೆ ಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು