ಲಕ್ಷ್ಮೀಶ ತೋಳ್ಪಾಡಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಕ್ಷ್ಮೀಶ ತೋಳ್ಪಾಡಿ
ಪುತ್ತೂರು: ಲೇಖಕ ಲಕ್ಷ್ಮೀಶ ತೋಳ್ಪಾಡಿ ಅವರು 2023ನೇ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರ `ಮಹಾಭಾರತ ಅನುಸಂಧಾನದ ಭಾರತ ಯಾತ್ರೆ' ಎಂಬ ಪ್ರಬಂಧಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆ.
ಲಕ್ಷ್ಮೀಶ ತೋಳ್ಪಾಡಿ ಅವರ ಪರಿಚಯ
ಶಾಂತಿಗೋಡು ವಿಷ್ಣುಮೂರ್ತಿ ತೋಳ್ಪಾಡಿ ಮತ್ತು ರತ್ನಮ್ಮ ದಂಪತಿ ಪುತ್ರರಾದ ಲಕ್ಷ್ಮೀಶ ತೋಳ್ಪಾಡಿ ಅವರು 12-9-1947ರಲ್ಲಿ ಜನಿಸಿದರು. ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಕೆಂಬ್ಲಾಜೆ ಎಂಬಲ್ಲಿ ತನ್ನ ಪತ್ನಿ ವಿಜಯಲಕ್ಷ್ಮೀ ಮತ್ತು ಮಕ್ಕಳಾದ ಪರೀಕ್ಷಿತ್ ತೋಳ್ಪಾಡಿ ಮತ್ತು ಮಾಳವಿಕರೊಂದಿಗೆ ವಾಸವಾಗಿದ್ದಾರೆ.
ಪುತ್ತೂರು ಬೋರ್ಡು ಹೈಸ್ಕೂಲ್, ಮಂಗಳೂರು ಸರ್ಕಾರಿ ಕಾಲೇಜ್ನಲ್ಲಿ ಶಿಕ್ಷಣ ಪೂರೈಸಿ ಬಳಿಕ ಶ್ರೀ ವಿದ್ಯಾಭೂಷಣರ ಜೊತೆಗೆ ಮತ್ತು ಶ್ರೀ ಪೇಜಾವರ ಶ್ರೀಗಳಲ್ಲಿ ಸಂಸ್ಕೃತ ವೇದಾಂತ ಅಧ್ಯಯನ ಮಾಡಿದ್ದಾರೆ. ವೃತ್ತಿಯಲ್ಲಿ ಕೃಷಿಕರು, ಪ್ರವೃತ್ತಿಯಲ್ಲಿ ಸಾಹಿತ್ಯ, ತತ್ವಶಾಸ್ತ್ರಗಳ ಅಧ್ಯಯನಗಳ ಜೊತೆಗೆ ಭಾಷಣಗಳು, ಪ್ರವಚನಗಳು, ಕೃತಿ ರಚನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.
ವಿವಿಧ ವಿಚಾರಗಳ ಬಗೆಗಿನ ಚಿಂತನೆಯ ಬರಹ ರೂಪಗಳನ್ನು ಹೊರ ತಂದಿದ್ದಾರೆ. ಪರಿಸರ ಜಾಗೃತಿ ಹೋರಾಟ ಗಳಲ್ಲಿಯೂ ಮುಂಚೂಣಿಯಲ್ಲಿದ್ದರು. ಪಶ್ಚಿಮ ಘಟ್ಟ ಉಳಿಸಿ ಹೋರಾಟ, ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ನೊಂದಿಗೆ ನಿಕಟ ಸಂಪರ್ಕ ಹೊಂದಿ 1995-96ರಲ್ಲಿ ಕುಮಾರಧಾರಾ ಉಳಿಸಿ ಹೋರಾಟ (ಭರೂಕ ಕಂಪೆನಿಯು ಅಣೆಕಟ್ಟು ಕಟ್ಟುವುದನ್ನು ವಿರೋಧಿಸಿ) ಭಾಗಿಯಾಗಿದ್ದರು. 10 ವರ್ಷಗಳ ಕಾಲ ಭಾರತೀಯ ಕಿಸಾನ್ ಸಂಘದ ರಾಜ್ಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 80ರ ದಶಕದಲ್ಲಿ ತಾಳಮದ್ದಳೆ ಕ್ಷೇತ್ರದ ಉನ್ನತ ಸ್ಥಂಭಗಳಾದ ದೇರಾಜೆ ಮತ್ತು ಶೇಣಿಯವರ ಆಪ್ತ ಒಡನಾಟ ಹೊಂದಿದ್ದರು.
ರಚಿಸಿರುವ ಕೃತಿಗಳು
ಮಹಾಯುದ್ಧಕ್ಕೆ ಮುನ್ನ (ಭಗವದ್ಗೀತೆಯ ಕುರಿತು ಟಿಪ್ಪಣಿ), ಸಂಪಿಕೆ ಭಾಗವತ, ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ (ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಕೃತಿ) ಆನಂದ ಲಹರಿ, ಭವ ತಲ್ಲಣ, ಭಕ್ತಿಯ ನೆಪದಲ್ಲಿ, ಮಹಾಭಾರತ ಅನುಸಂಧಾನದ ಭಾರತ ಯಾತ್ರೆ(ರಾ.ಸಾ.ಅ. ದತ್ತಿನಿಧಿ ಪ್ರಶಸ್ತಿ ಪಡೆದ ಲೇಖನ), ಮಾತಿಗೆ ಮುನ್ನ (ಅಡಿಗರ ಕಾವ್ಯ ಕುರಿತು ಲೇಖನಗಳು ಕೃತಿಯನ್ನು ರಚಿಸಿದ್ದಾರೆ.
ಪ್ರವಚನ ಮತ್ತು ಉಪನ್ಯಾಸಗಳು
ಮಂಕುತಿಮ್ಮನ ಕಗ್ಗ-ಇತ್ಯಾದಿ ಅನೇಕ ವಿಷಯಗಳ ಕುರಿತು ಸರಣಿ ಪ್ರವಚನ ನಡೆಸುತ್ತಾ ಬಂದಿದ್ದಾರೆ. ಮಂಗಳೂರು -ಮೈಸೂರು ವಿಶ್ವವಿದ್ಯಾಲಯದ ವಿವಿಧ ಪೀಠಗಳ ಆಶ್ರಯದಲ್ಲಿ ನಡೆದ ಸಭೆಗಳಲ್ಲಿ, ಗೋಷ್ಠಿಗಳಲ್ಲಿ ನಾಡಿನ ಅನೇಕ ಕಾಲೇಜು ವಿದ್ಯಾಸಂಸ್ಥೆಗಳಲ್ಲಿ, ಸಾಗರದ ನೀನಾಸಂ, ಮೈಸೂರಿನ ರಂಗಾಯಣ, ಬೆಂಗಳೂರಿನ ಗೋಖಲೆ ಸಂಸ್ಥೆ, ಇಸ್ಕಾನ್, ರಾಯಚೂರಿನ 'ಸುದ್ದಿಮೂಲ' ಪತ್ರಿಕೆಯವರು ಪ್ರತಿವರ್ಷ ನಡೆಸುವ ವಚನಾನುಭಾವ ಗೋಷ್ಠಿಗಳು- ಇತ್ಯಾದಿ ವಿಚಾರ ಸಂಕಿರಣಗಳಲ್ಲಿ ನಿರಂತರವಾಗಿ ಪಾಲ್ಗೊಂಡಿರುವುದು
ವಿದೇಶದಲ್ಲಿಯೂ ಕನ್ನಡದ ಕಂಪು
2017ರಲ್ಲಿ ಅಮೆರಿಕದ ಕನ್ನಡ ಸಾಹಿತ್ಯ ರಂಗ (ಕೆಎಸ್ಆರ್) ಏರ್ಪಡಿಸಿದ ಸಾಹಿತ್ಯ ಸಮ್ಮೇಳನದಲ್ಲಿ ಆಹ್ವಾನಿತರಾಗಿ ಪಾಲ್ಗೊಂಡು ಬೋಸ್ಟನ್, ನ್ಯೂ ಜೆರ್ಸಿ, ಚಿಕಾಗೊ, ಲಾಸ್ ಏಂಜಲೀಸ್ ಮುಂತಾದ ಅನೇಕ ನಗರಗಳಲ್ಲಿ ಕನ್ನಡಿಗರ ಸಂಘ-ಸಂಸ್ಥೆಗಳಲ್ಲಿ, ನ್ಯೂಯಾರ್ಕ್ ವಿಶ್ವವಿದ್ಯಾಲಯದ ಕನ್ನಡ ಪೀಠದಲ್ಲಿ - ಉಪನ್ಯಾಸ ನಡೆಸಿರುವುದು.
ಪ್ರಶಸ್ತಿಗಳು:
ಪೊಳಲಿ ಶಾಸ್ತ್ರೀ ಪ್ರಶಸ್ತಿ - 2009, ಕಡವ ಶಂಭು ಶರ್ಮ ಪ್ರಶಸ್ತಿ -2013, ಕಾಂತಾವರ ಸಾಹಿತ್ಯ ಪುರಸ್ಕಾರ- 2013, ರಾಮ ವಿಠಲ ಪ್ರಶಸ್ತಿ- (ಪೇಜಾವರ ಅಧೋಕ್ಷಜ ಮಠ )-2013. ರಮಾ ಗೋವಿಂದ ಪುರಸ್ಕಾರ, ಮೈಸೂರು -2016, ಅರಣ್ಯ ಮಿತ್ರ ಪ್ರಶಸ್ತಿ, ಅರಣ್ಯ ಇಲಾಖೆ, ಮಂಗಳೂರು. - 2016, ಭಾರತ ಪುರಸ್ಕಾರ- ಪರ್ಯಾಯ ಪಲಿಮಾರು ಮಠ -2020 ಸೇರಿದಂತೆ ಅನೇಕ ಕಡೆ ಪ್ರಶಸ್ತಿ ಸನ್ಮಾನಗಳು ಇವರ ಸಾಹಿತ್ಯ ದುಡಿಮೆಗೆ ಸಂದ ಪ್ರತಿಫಲಗಳಾಗಿವೆ.