ಕೊಣಾಜೆ: ಮಹಿಳೆಯ ಸರ ಕಸಿದು ಪರಾರಿಯಾಗಿದ್ದ ಆರೋಪಿಗಳ ಬಂಧನ
ಕೊಣಾಜೆ: ಮುಡಿಪು ಸಮೀಪದ ಮುದುಂಗಾರು ಕಟ್ಟೆ ಬಳಿ ಮಹಿಳೆಯೊಬ್ಬರ ಬಂಗಾರದ ಸರ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನವಾಝ್ ಯಾನೆ ನವ್ವ(32) ಹಾಗೂ ನಿಯಾಫ್ ಯಾನೆ ನಿಯಾ(28) ಎಂದು ಗುರುತಿಸಲಾಗಿದೆ.
ಮುದುಂಗಾರು ಕಟ್ಟೆ ಕಲ್ಲಾಪು ನಿವಾಸಿ ಯಮುನಾ ಎಂಬವರು ಶುಕ್ರವಾರದಂದು ಮುದುಂಗಾರು ಕಟ್ಟೆ ಶಾಲಾ ಹಿಂಭಾಗದ ಪರಿಸರದಲ್ಲಿ ಸೊಪ್ಪು ಕೊಯ್ಯುತ್ತಿದ್ದಾಗ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಮಹಿಳೆಯ ಸುಮಾರು ಒಂದುವರೇ ಪವನ್ ನ ಬಂಗಾರದ ಸರ ಕಸಿದು ಪರಾರಿಯಾಗಿದ್ದರು. ಈ ಸಂದರ್ಭ ಮಹಿಳೆ ಬೊಬ್ಬೆ ಹಾಕಿದ್ದರು. ಬಳಿಕ ಕೂಡಲೇ ಮಹಿಳೆಯ ಮನೆಯವರು ಕೊಣಾಜೆ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದರು ಹಾಗು ಸಿಸಿ ಟಿವಿಗಳ ಪರಿಶೀಲನೆಯನ್ನು ಮಾಡಿದ್ದರು.
ಕಳ್ಳತನ ನಡೆದ ಎರಡನೇ ದಿನದಲ್ಲಿ ಕೊಣಾಜೆ ಪೊಲೀಸರಾದ ಪಿಎಸ್ ಐ ವಿನೋದ್, ಸಿಬ್ಬಂದಿಗಳಾದ ಸಂತೋಷ್ ಕೆಸಿ, ಬಸವಣ ಗೌಡ ಹಾಗೂ ಸುರೇಶ್ ರವರು ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ರವಿವಾರ ಕೈರಂಗಳ ಗ್ರಾಮದ ವಿದ್ಯಾನಗರ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ. ಆರೋಪಿಗಳಿಂದ ಹತ್ತು ಗ್ರಾಂ ಬಂಗಾರ ಹಾಗೂ ಸ್ಕೂಟರನ್ನು ವಶಪಡಿಸಿಕೊಂಡಿಸಿದ್ದಾರೆ.
ಆರೋಪಿಗಳಲ್ಲಿ ನವಾಝ್ ಎಂಬಾತನ ವಿರುದ್ಧ ಕೊಣಾಜೆ ಠಾಣೆಯಲ್ಲಿ ಈ ಹಿಂದೆಯೇ ದರೋಡೆ ಹಾಗೂ ಗಲಾಟೆ ಪ್ರಕರಣಗಳು ದಾಖಲಾಗಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.