ಕೊಣಾಜೆ: ಪ್ರಾಸ್ಟಿಕ್ ತ್ಯಾಜ್ಯ ಎಸೆಯುತ್ತಿದ್ದ ಟೆಂಪೊಗೆ ಸ್ಥಳದಲ್ಲೇ ದಂಡ ವಿಧಿಸಿದ ಪಂಚಾಯತ್
ಕೊಣಾಜೆ : ಕೊಣಾಜೆ ಗ್ರಾಮ ಪಂಚಾಯತ್ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವವರ ವಿರುದ್ಧ ಕಳೆದ ಕೆಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಗುರುವಾರದಂದು ಟೆಂಪೋವೊಂದರಲ್ಲಿ ಬಂದ ಕಾರ್ಮಿಕರು ಪ್ಲಾಸ್ಟಿಕ್ ತ್ಯಾಜ್ಯ ವನ್ನು ಕೊಣಾಜೆ ರಸ್ತೆ ಬಳಿ ಎಸೆಯುತ್ತಿದ್ದಾಗ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ತಾಜ್ಯ ಎಸೆದವರ ಮೇಲೆ ದಂಡ ವಿಧಿಸಿ ಕ್ರಮ ತೆಗೆದುಕೊಂಡಿದ್ದಾರೆ.
ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡುಪದವು ಬಸ್ ಕ್ರಾಸ್ ಬಸ್ ನಿಲ್ದಾಣದ ಬಳಿ ಹಾಸ್ಟೆಲ್ ಕಾಮಗಾರಿ ಭರ ದಿಂದ ಸಾಗುತ್ತಿದ್ದು, ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಟೆಂಪೋ ಮೂಲಕ ಬಂದು ಕೊಣಾಜೆ ಗ್ರಾಮದ ಗಣೇಶ್ ಮಹಲ್ ಬಳಿ ತ್ಯಾಜ್ಯವನ್ನು ಎಸೆಯುತ್ತಿದ್ದಾಗ ಕೊಣಾಜೆ ಪಂಚಾಯತ್ ನ ಅಧ್ಯಕ್ಷರಾದ ಗೀತಾ ದಾಮೋದರ್ , ಸದಸ್ಯರಾದ ಅಚ್ಯುತ ಗಟ್ಟಿ, ಮಹಮ್ಮದ್ ಇಕ್ಬಾಲ್, ಕಾರ್ಯದರ್ಶಿ ಚಿತ್ರಾ , ಸಿಬ್ಬಂದಿಗಳಾದ ಗುಲಾಬಿ, ಸವಿತಾ ಸುಮಲತಾ ಮೊದಲಾದವರ ತಂಡ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಟೆಂಪೋ ವನ್ನು ಪತ್ತೆ ಹಚ್ಚಿ ವಿಚಾರಿಸಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಹಾಸ್ಟೆಲ್ ನಿರ್ಮಾಣ ಪರಿಸರದಲ್ಲೂ ಅಲ್ಲಿಯ ಕಾಮಗಾರಿಯ ಕೊಳಚೆ ನೀರನ್ನು ಕೆಲವಮ್ಮೆ ರಸ್ತೆಗೆ ಬಿಡಲಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯ ಎಸೆಯದಂತೆ ಫಲಕ, ಬ್ಯಾನರ್ ಅಳವಡಿಕೆ ಸೇರಿದಂತೆ ಅನೇಕ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾದರೂ ಯಾವುದೇ ಪರಿಣಾಮ ಬೀರದೇ ಇದ್ದಾಗ ಬಳಿಕ ಕೊಣಾಜೆ ಗ್ರಾಮ ಪಂಚಾಯತ್ ನ ಸದಸ್ಯರು, ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿಕೊಂಡು ಕಾವಲುಪಡೆ ರಚಿಸಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯು ವವರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಈಗಾಗಲೇ ಕಸ, ತ್ಯಾಜ್ಯ ಎಸೆಯುವ ಹಲವರನ್ಬು ಕಾವಲು ಪಡೆ ತಂಡ ಪತ್ತೆ ಹಚ್ಚಿದ್ದು, ಸಿಕ್ಕಿ ಬಿದ್ದವರಿಗೆ ಕೊಣಾಜೆ ಪಂಚಾಯತ್ ದಂಡ ವಿಧಿಸಿ ಎಚ್ಚರಿಕೆ ನೀಡಿ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.