ಕೊಣಾಜೆ ಗ್ರಾ.ಪಂ: ಅಧ್ಯಕ್ಷರಾಗಿ ಗೀತಾ, ಉಪಾಧ್ಯಕ್ಷರಾಗಿ ಹರಿಶ್ಚಂದ್ರ ಆಯ್ಕೆ
ಕೊಣಾಜೆ: ಕೊಣಾಜೆ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಮಂಗಳವಾರ ಕೊಣಾಜೆ ಪಂಚಾಯತ್ ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೀತಾ ದಾಮೋದರ್ ಹಾಗೂ ಉಪಾಧ್ಯಕ್ಷರಾಗಿ ಹರಿಶ್ಚಂದ್ರ ಶೆಟ್ಟಿಗಾರ್ ಆಯ್ಕೆಯಾದರು.
ಒಟ್ಟು 29 ಸದಸ್ಯ ಬಲವಿರುವ ಕೊಣಾಜೆ ಗ್ರಾಮ ಪಂಚಾಯಿತಿಯಲ್ಲಿ, ಬಿಜೆಪಿ ಬೆಂಬಲಿತ 16, ಕಾಂಗ್ರೆಸ್ ಬೆಂಬಲಿತರು 10 ಹಾಗೂ ಎಸ್ ಡಿಪಿ ಐ ಬೆಂಬಲಿತರು 3 ಸದಸ್ಯರಿದ್ದಾರೆ. ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಗೀತಾ ದಾಮೋದರ್ ಕುಂದರ್ , ಕಾಂಗ್ರೆಸ್ ನಿಂದ ಶೋಭಾ ರತ್ನಾಕರ್ ಅವರು ಸ್ಪರ್ಧಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹರಿಶ್ಚಂದ್ರ ಶೆಟ್ಟಿಗಾರ್ ಹಾಗೂ ಕಾಂಗ್ರೆಸ್ ಕಡೆಯಿಂದ ಮಹಮ್ಮದ್ ಇಕ್ಬಾಲ್ ಬರ್ವ ಅವರು ಸ್ಪರ್ಧಿಸಿದ್ದರು.
ಎಸ್ ಡಿ ಪಿ ಐ ಹೈದರ್ ಮತ್ತು ಫೌಝಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ, ಹಿಂಪಡೆದರು.
ಮಂಗಳವಾರ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತೆ ಗೀತಾ ದಾಮೋದರ್ ಅವರು 14, ಹರಿಶ್ಚಂದ್ರ ಶೆಟ್ಟಿಗಾರ್ ಅವರು 14 ಮತ ಪಡೆದು ಜಯಗಳಿಸಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು. ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶೋಭಾ ರತ್ನಾಕರ್ ಹಾಗೂ ಮಹಮ್ಮದ್ ಇಕ್ಬಾಲ್ ಬರ್ವ ಅವರು ಕ್ರಮವಾಗಿ 13 ಮತಗಳನ್ನು ಪಡೆದಿದ್ದರು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಓರ್ವ ಸದಸ್ಯೆ ವೇದಾವತಿ ಗಟ್ಟಿ ಗೈರು ಹಾಜರಾಗಿರುವುದು ಕುತೂಹಲ ಮೂಡಿಸಿತ್ತು. ಹಾಗೂ ಓರ್ವ ಸದಸ್ಯರ ಮತ ಅಸಿಂಧುವಾಗಿತ್ತು. ಎಸ್ ಡಿಪಿಐ ಬೆಂಬಲಿತರು ಕಾಂಗ್ರೆಸ್ ಬೆಂಬಲಿತರಿಗೆ ಬೆಂಬಲಿಸಿದ್ದರು. ಜಿ.ಪಂ. ಮೀನುಗಾರಿಕಾ ಇಲಾಖ ಉಪನಿರ್ದೇಶಕರು ದಿಲೀಪ್ ಕುಮಾರ್ ಚುಣಾವಣಾಧಿಕಾರಿಯಾಗಿ ಚುಣಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ, ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹಾಗೂ ಮುಖಂಡರು ಭಾಗವಹಿಸಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದಿಸಿದರು.