ಮಂಗಳೂರು: ಕೊಂಕಣಿ ಲೇಖಕ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿಸೋಜ ನಿಧನ
ಮಂಗಳೂರು, ಅ.26: ಹಿರಿಯ ಕೊಂಕಣಿ ಲೇಖಕ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿಸೋಜ (75) ಗುರುವಾರ ನಗರದಲ್ಲಿ ನಿಧನರಾದರು.
ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಗರದ ವೆಲೆನ್ಸಿಯಾದ ನಿವಾಸಿಯಾಗಿದ್ದ ಅವರು ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನಲ್ಲಿ ಕಲಿತರು. ವಾಣಿಜ್ಯ ದಲ್ಲಿ ಪದವಿ ಮತ್ತು ಕೊಂಕಣಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದ ಅವರು ಯುನೈಟೆಡ್ ಸ್ಟೇಟ್ಸ್‌ನ ಬೈಬಲ್ ಸ್ಕೂಲ್‌ನಿಂದ ಐದು ಆನ್‌ಲೈನ್ ಡಿಪ್ಲೊಮಾಗಳನ್ನು ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಪರಿಣತಿ ಪಡೆದರು.
1964ರಲ್ಲಿ ಸಣ್ಣ ಕಥೆಯನ್ನು ಕೊಂಕಣಿಯಲ್ಲಿ ಬರೆಯಲು ಆರಂಭಿಸಿದ ಅವರು ಬಳಿಕ 33 ಕಾದಂಬರಿಗಳು, 100ಕ್ಕೂ ಅಧಿಕ ಸಣ್ಣ ಕಥೆಗಳನ್ನು ಬರೆದಿದ್ದಾರೆ. ಅವರ ಅನೇಕ ಸಣ್ಣ ಕಥೆಗಳು ಇಂಗ್ಲಿಷ್, ಕನ್ನಡ, ಹಿಂದಿ, ಕಾಶ್ಮೀರಿ, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ.
ಎಡ್ವಿನ್ ಅವರ ಸಾಹಿತ್ಯ ಕೊಡುಗೆಗಳಿಗಾಗಿ ರಾಜ್ಯ, ಅಂತರ್ ರಾಜ್ಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು. ಅವರ ಪ್ರಸಿದ್ಧ ಸಣ್ಣ ಕಥೆ ‘ಎ ಕಪ್ ಆಫ್ ಹಾಟ್ ಕಾಫಿ’ ಜೈಕೋ ಬುಕ್ಸ್ ಪ್ರಕಟಿಸಿದ ಭಾರತೀಯ ಸಣ್ಣ ಕಥೆಗಳು ಸಂಕಲನ ದಲ್ಲಿ ಕಾಣಿಸಿಕೊಂಡಿದೆ. ಅವರ ಹೃದಯಸ್ಪರ್ಶಿ ಸಣ್ಣ ಕಥೆ ‘ಚಾಕೊಲೇಟ್‌ಗಳು’ ರೀಡರ್ಸ್ ಡೈಜೆಸ್ಟ್ ಗೈಡ್ ಟು ಫುಡ್, ವಿಶೇಷ ಕಲೆಕ್ಟರ್ಸ್ ಎಡಿಶನ್‌ನಲ್ಲಿ ಎರಡು ಬಾರಿ ಕಾಣಿಸಿಕೊಂಡಿದೆ.
ಅನುವಾದ ಕ್ಷೇತ್ರದಲ್ಲೂ ಎಡ್ವಿನ್ ತೊಡಗಿಸಿಕೊಂಡಿದ್ದು, ಇಂಗ್ಲಿಷ್‌ನಿಂದ ಕೊಂಕಣಿಗೆ (ನಾಗರಿ/ಕನ್ನಡ ಲಿಪಿ) ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ. 1995ರಲ್ಲಿ ಕೊಂಕಣಿ ಚಲನಚಿತ್ರ ‘ಬಾಕ್ಸ್‌ಸೇನ್’ಗೆ ಸಂಭಾಷಣೆ ಬರೆದಿದ್ದಾರೆ.
ಗೋವಾ ಕೊಂಕಣಿ ಅಕಾಡಮಿಯು ಅವರ 450 ಪುಟಗಳ ನಾಗರಿ ಲಿಪಿಯ ಕಾದಂಬರಿ ‘ಕಲ್ಲೆಂ ಭಂಗಾರ್’ನ್ನು ಪ್ರಕಟಿಸಿತು. ಈ ಕಾದಂಬರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ 2013ರ ವರ್ಷದ ಅತ್ಯುತ್ತಮ ಪುಸ್ತಕ ಮತ್ತು ವಿಮಲಾ ವಿ. ಪೈ ವಿಶ್ವ ಕೊಂಕಣಿ ಪ್ರಶಸ್ತಿ ಲಭಿಸಿದೆ.
2015ರಲ್ಲಿ ಫೆಡರೇಶನ್ ಆಫ್ ಕೊಂಕಣಿ ಕ್ಯಾಥೋಲಿಕ್ ಅಸೋಸಿಯೇಶನ್ ಅವರನ್ನು ಗೌರವಿಸಿತ್ತು. ಕೊಂಕಣಿ ಕುಟಮ್ ಬಹರೈನ್ ಅವರಿಗೆ 2015ರಲ್ಲಿ ಕೊಂಕಣಿ ಸಾಹಿತ್ಯ ಜೀವಮಾನ ಪ್ರಶಸ್ತಿಯನ್ನು ನೀಡಿತು.
ಕೇಂದ್ರ ಸಾಹಿತ್ಯ ಅಕಾಡಮಿಯ (2008-2012) ಜನರಲ್ ಕೌನ್ಸಿಲ್‌ನ ಸದಸ್ಯರಾಗಿದ್ದ ಅವರು ಸಂಶೋಧನೆಗಾಗಿ ಫೆಲೋಶಿಪ್ ಪ್ರಶಸ್ತಿಗಳನ್ನು ನಿರ್ಧರಿಸುವ ಹೊಸದಿಲ್ಲಿಯ ಸಂಸ್ಕೃತಿ ಸಚಿವಾಲಯದ ತಜ್ಞರ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಗೋವಾ ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಮಂಡಳಿಯಲ್ಲಿ ಹೆಚ್ಚುವರಿಯಾಗಿ ಸೇವೆ ಸಲ್ಲಿಸಿದ್ದರು. 1992ರಲ್ಲಿ ಕಾರವಾರದಲ್ಲಿ ನಡೆದ 11ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.